ಗಜೇಂದ್ರಗಡ ಉದ್ಯಾನ-ತೀರಾ ಅಧ್ವಾನ

29 GJD 1 PARK
Published on

ಶಿವಕುಮಾರ ಶಶಿಮಠ ಗಜೇಂದ್ರಗಡ

ಪಟ್ಟಣದ ಪುರಸಭೆ ಅಧಿಕಾರಿಗಳ ನಿಷ್ಕಾಳಜಿ ಹಾಗೂ ನಿರ್ವಹಣೆ ಕೊರತೆಯಿಂದ ಉದ್ಯಾನವು ಹಾಳಾಗುತ್ತಿದ್ದು, ಸಾರ್ವಜನಿಕರು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಪಟ್ಟಣದ ಹೊರವಲಯದಲ್ಲಿ 3 ಎಕರೆ ಜಾಗದಲ್ಲಿ 2013ರಲ್ಲಿ ಉದ್ಯಾನ ನಿರ್ವಿುಸಲಾಗಿದೆ. ಆರಂಭದಲ್ಲಿ ಎಲ್ಲರ ನೆಚ್ಚಿನ ತಾಣವಾಗಿತ್ತು. ಆದರೆ, ಕಳೆದೆರಡು ವರ್ಷಗಳಿಂದ ಹಾಳು ಕೊಂಪೆಯಂತಾಗಿದೆ. ಹುಲ್ಲಿನ ಹಾಸಿನ ಮೇಲೆ ಕಸ ಬೆಳೆದು ಉದ್ಯಾನದ ಅಂದಗೆಡಿಸಿದೆ. ಉದ್ಯಾನದಲ್ಲೆಲ್ಲ ಕಸದ ರಾಶಿ ತುಂಬಿದೆ. ಅಲ್ಲದೆ, ವಿಷಜಂತುಗಳ ಕಾಟವೂ ಹೆಚ್ಚಾಗಿದೆ.

ಸದ್ಯ ಉದ್ಯಾನವು ವಾಯುವಿಹಾರಿಗಳಿಗೆ ಮಾತ್ರ ಸೀಮಿತವಾಗಿದೆ. ಮಕ್ಕಳಿಗೆ ಆಟವಾಡಲು ಜಾರುಬಂಡೆ ಬಿಟ್ಟರೆ ಮತ್ತಾವ ಆಟಿಕೆಗಳು ಇಲ್ಲಿಲ್ಲ. ಜೋಕಾಲಿ, ತಿರುಗುವ ವೃತ್ತ, ಗೊಂಬೆ ನೃತ್ಯ ಸೇರಿ ಮುಂತಾದ ಆಟಿಕೆಗಳು ಉಪಯೋಗಕ್ಕೆ ಬಾರದಂತಾಗಿವೆ. ಆಟಿಕೆ ಸಾಮಾನುಗಳನ್ನು ಅಳವಡಿಸುವಂತೆ ಮಕ್ಕಳ ಪಾಲಕರು ಪುರಸಭೆ ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ನಾರುವ ಶೌಚಗೃಹ:

ವಾಯುವಿಹಾರಕ್ಕಾಗಿ ಪಾತ್​ವೇ ನಿರ್ವಿುಸಲಾಗಿದ್ದು, ಎರಡೂ ಬದಿ ಗಿಡಗಂಟಿ ಬೆಳೆದಿವೆ. ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ವಿುಸಿರುವ ಪುರುಷ ಮತ್ತು ಮಹಿಳಾ ಶೌಚಗೃಹವು ದುರ್ನಾತ ಬೀರುತ್ತಿದೆ.

ಉದ್ಯಾನ ನಿರ್ವಹಣೆ, ಸ್ವಚ್ಛತೆ ಕಾಪಾಡಲು ಇಬ್ಬರನ್ನು ನೇಮಿಸಲಾಗಿತ್ತು. ಆದರೆ, ಸಮರ್ಪಕ ವೇತನ ನೀಡದಿರುವುದರಿಂದ ಪ್ರಸ್ತುತ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿಲ್ಲ. ‘ಸ್ವಂತ ದುಡ್ಡು ವ್ಯಯಿಸಿ ಒಂದೆರಡು ಬಾರಿ ಸ್ವಚ್ಛತೆ ಮಾಡಿದ್ದೇವೆ. ವರ್ಷಕ್ಕೆ ಎರಡು ಬಾರಿ 10ಲೀ ಪೆಟ್ರೋಲ್ ಕೊಡುತ್ತಾರೆ. 17 ತಿಂಗಳಿನಿಂದ ವೇತನ ನೀಡಿಲ್ಲ’ ಎಂದು ನಿರ್ವಹಣೆಗಾರರು ಬೇಸರ ವ್ಯಕ್ತಪಡಿಸಿದರು.

ಪಾರ್ಕ್​ಗೊಂದು ಹೆಸರಿಡಿ

ಈ ಉದ್ಯಾನಕ್ಕೆ ಅಧಿಕೃತವಾಗಿ ಹೆಸರಿಲ್ಲ. ಮೊದಲು ಭಗತಸಿಂಗ್ ಉದ್ಯಾನ ಎಂದು, ಬಳಿಕ ರಾಣಿಚನ್ನಮ್ಮ ಉದ್ಯಾನ ಎಂದು ಫಲಕ ಹಾಕಿದ್ದರು. ಮತ್ತೇ ಐದಾರು ತಿಂಗಳು ಕಳೆಯುವಷ್ಟರಲ್ಲಿ ಭಗತಸಿಂಗ್ ಉದ್ಯಾನ ಎಂಬ ಫಲಕ ಕಂಡು ಬಂದಿತು. ಆದರೀಗ ರಾಣಿ ಚನ್ನಮ್ಮ ಉದ್ಯಾನ ಎಂಬ ಫಲಕ ಇದ್ದರೂ ಅದೂ ಅಧಿಕೃತವಲ್ಲ ಎಂಬುದು ಸಾರ್ವಜನಿಕರ ಮಾತು. ಈ ಉದ್ಯಾನಕ್ಕೊಂದು ಸೂಕ್ತ, ಅಧಿಕೃತವಾದ ಹೆಸರಿಡಿ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಅಧಿಕಾರಗಳ ಇಚ್ಛಾಶಕ್ತಿ, ಜಪ್ರತಿನಿಧಿಗಳ ನಿಷ್ಕಾಳಜಿಯಿಂದಾಗಿ ಉದ್ಯಾನದಲ್ಲಿ ವಿಷಜಂತುಗಳ ಕಾಟ ವಿಪರೀತವಾಗಿದೆ. ಇದು ಹೀಗೆ ಮುಂದುವರಿದರೆ ನಿಷ್ಪ್ರಯೋಜಕ ಉದ್ಯಾನವಾಗಿ ಮಾರ್ಪಡುತ್ತದೆ. ಹೀಗಾಗಿ ಸ್ವಚ್ಛಗೊಳಿಸಿ, ಮೂಲಸೌಕರ್ಯ ಒದಗಿಸಿ, ಉದ್ಯಾನದ ಅಂದ ಹೆಚ್ಚಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಶ್ರಮಿಸಬೇಕು. | ಪ್ರವೀಣ ಹಂದಿಗೋಳ, ಸ್ಥಳೀಯ

ಎಸ್​ಎಫ್​ಸಿ ಅನುದಾನದಲ್ಲಿ 25 ಲಕ್ಷ ರೂ. ಬಳಸಿ ಉದ್ಯಾನದಲ್ಲಿ ಜಿಮ್ ಸಲಕರಣೆಗಳು, ಕಾಂಪೌಂಡ್, ಸ್ಟೀಲ್ ಗ್ರಿಲ್, ಪಾತ್​ವೇ ನಿರ್ವಿುಸಲಾಗಿದೆ. ಮುಂಬರುವ ಆರ್ಥಿಕ ವರ್ಷಗಳಲ್ಲಿ ಸಣ್ಣ ಮಕ್ಕಳ ಆಟಿಕೆಗಳನ್ನು ಜೋಡಿಸಲಾಗುವುದು. ಉದ್ಯಾನ ಸ್ವಚ್ಛ ಹಾಗೂ ಸುಂದರವಾಗಿ ಕಂಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. | ಬಸವರಾಜ ಬಳಗಾನೂರ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net