ಗಜೇಂದ್ರಗಡ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ

2-gjd- story
Published on

ಗಜೇಂದ್ರಗಡ: ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ 2ನೇ ಅವಧಿಗೆ ಸೆ.3ರಂದು ಚುನಾವಣೆ ನಿಗದಿಯಾಗಿದ್ದು, ಸೋಮವಾರ ಪಟ್ಟಣ ಬಿರುಸಿನ ರಾಜಕೀಯ ಚಟುವಟಿಕೆಗಳಿಗೆ ಸಾಕ್ಷಿಯಾಯಿತು. ಬಿಜೆಪಿ ಸದಸ್ಯರಲ್ಲಿಯೇ ಎರಡು ಬಣಗಳಾಗಿದ್ದು, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ತೀವ್ರ ಕುತೂಹಲ ಕೆರಳಿಸಿದೆ.

23 ಸದಸ್ಯ ಬಲದ ಪುರಸಭೆಯಲ್ಲಿ 18 ಬಿಜೆಪಿ, ಐವರು ಕಾಂಗ್ರೆಸ್ ಸದಸ್ಯರಿದ್ದಾರೆ. 18ಬಿಜೆಪಿ ಸದಸ್ಯರ ಪೈಕಿ 12 ಸದಸ್ಯರದು ಒಂದು ಬಣ. ಆರು ಜನ ಸದಸ್ಯರ ಮತ್ತೊಂದು ಬಣ ಸೃಷ್ಟಿಯಾಗಿದೆ. ಎರಡು ಬಣಗಳ ನಡುವೆ ಸೋಮವಾರ ತೀವ್ರ ಚಟುವಟಿಕೆಗಳು ನಡೆದವು. ಇಷ್ಟು ದಿನ ಹೈಕಮಾಂಡ್ ಹೇಳಿದ ಹಾಗೆ ಕೇಳುತ್ತೇವೆ ಎನ್ನುತ್ತಿದ್ದ ಆಕಾಂಕ್ಷಿಗಳು, ಈಗ ಇಂಥವರನ್ನೇ ಆಯ್ಕೆ ಮಾಡಬೇಕು ಎಂದು ಪಟ್ಟು ಹಿಡಿದ್ದಾರೆ. ಇದು ಮಾಜಿ ಶಾಸಕರು ಹಾಗೂ ಪಕ್ಷದ ಹಿರಿಯರಿಗೆ ತಲೆನೋವು ತರಿಸಿದೆ.

ರಹಸ್ಯ ಮೀಟಿಂಗ್: ಒಂದು ಬಣದವರು ಪಟ್ಟಣದ ಹೊರವಲಯದಲ್ಲಿ ಸೋಮವಾರ ರಹಸ್ಯ ಮೀಟಿಂಗ್ ನಡೆಸಿದರು. ತಮ್ಮಲ್ಲಿಯೇ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸ್ಥಾಯಿ ಕಮಿಟಿ ಅಧ್ಯಕ್ಷರಾಗಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಬೇಡಿಕೆ ಬಲವಾಗಿ ಮಂಡಿಸುವ ಬಗ್ಗೆ ಕಾರ್ಯತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಮೊದಲ ಅವಧಿಗೆ 23ನೇ ವಾರ್ಡಿನ ವೀರಪ್ಪ ಪಟ್ಟಣಶೆಟ್ಟಿ, 7ನೇ ವಾರ್ಡಿನ ಲೀಲಾವತಿ ಅಶೊಕ ವನ್ನಾಲ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಈಗ ಪ್ರಕಟವಾಗಿರುವ ಮೀಸಲಾತಿಯಂತೆ ಅಧ್ಯಕ್ಷ ಸ್ಥಾನಕ್ಕೆ 19ನೇ ವಾರ್ಡಿನ ಸುಭಾಸ ಮ್ಯಾಗೇರಿ, 2ನೇ ವಾರ್ಡಿನ ಯಮನಪ್ಪ ತಿರಕೋಜಿ ಪ್ರಬಲ ಅಕಾಂಕ್ಷಿಗಳಾಗಿದ್ದಾರೆು. ಆದರೆ, 14ನೇ ವಾರ್ಡಿನ ಉಮಾ ಮ್ಯಾಕಲ್, 18ನೇ ವಾರ್ಡಿನ ಮುದಿಯಪ್ಪ ಮುಧೋಳ ಹಾಗೂ 8ನೇ ವಾರ್ಡಿನ ದ್ರಾಕ್ಷಾಯಿಣಿ ಚೋಳಿನ ಅವರು ಪೈಪೋಟಿಯಲ್ಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ 9ನೇ ವಾರ್ಡಿನ ಕೌಸರಬಾನು ಹುನಗುಂದ, 22ನೇ ವಾರ್ಡಿನ ಲಕ್ಷ್ಮೀ ಮುಧೋಳ, 16ನೇ ವಾರ್ಡಿನ ಲೀಲಾವತಿ ಸವಣೂರ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಕಾಂಗ್ರೆಸ್ ಪ್ರಯತ್ನ: ಐವರು ಸದಸ್ಯರನ್ನು ಹೊಂದಿದ ಕಾಂಗ್ರೆಸ್ ಗದ್ದುಗೆ ಏರಲು ತೆರೆಮರೆಯಲ್ಲಿ ಶ್ರಮಿಸುತ್ತಿದೆ. ಬಿಜೆಪಿ ಹಲವಾರು ಸದಸ್ಯರಿಗೆ ಕ್ಷೇತ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ವಿವಿಧ ಆಸೆಗಳ ಮೂಲಕ ಬಿಜೆಪಿ ಸದಸ್ಯರಿಗೆ ಗಾಳ ಹಾಕುತ್ತಿದೆ ಎಂಬ ಮಾತು ಕೇಳಿ ಬಂದಿದೆ.

ಬಿಜೆಪಿಯ ಎಲ್ಲ ಸದಸ್ಯರಿಗೂ ವಿಪ್ ಜಾರಿ ಮಾಡಲಾಗಿದೆ. ಗಜೇಂದ್ರಗಡ ಪುರಸಭೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಶತಸಿದ್ಧ.| ಮುತ್ತು ಕಡಗದ ಬಿಜೆಪಿ ರೋಣ ಮಂಡಲ ಅಧ್ಯಕ್ಷ ನಾವು ಬಿಜೆಪಿ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಆದರೆ, ನಾವು ಹೇಳಿದ ಸದಸ್ಯರಿಗೆ ಸ್ಥಾನಮಾನ ನೀಡಬೇಕೆಂಬುದು ನಮ್ಮ 12 ಜನರ ಒತ್ತಾಯ. ಇದಕ್ಕೆ ಹೈಕಮಾಂಡ್ ಒಪ್ಪುತ್ತದೆ ಎಂಬ ನಂಬಿಕೆಯಿದೆ.ಹೆಸರು ಹೇಳಲು ಇಚ್ಛಿಸದ ಪುರಸಭೆ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net