ಪ್ಯಾಸ್ ಫೌಂಡೇಷನ್‌ನಿಂದ ಗಜಪತಿ ಕೆರೆ ಜೀರ್ಣೋದ್ಧಾರ

29-Jaggu-8.jpg
Published on

ಬೆಳಗಾವಿ: ಇಲ್ಲಿನ ಫ್ಯಾಸ್ ಫೌಂಡೇಷನ್ ಹಲವು ವರ್ಷಗಳಿಂದ ಬೆಳಗಾವಿ ಸುತ್ತಲಿನ ನೀರಿನ ಬವಣೆ ನೀಗಿಸುವಲ್ಲಿ ಮಹತ್ತರ ಸೇವೆ ಸಲ್ಲಿಸುತ್ತ ಬಂದಿದೆ. ಕುಡಿಯುವ ನೀರಿನ ಹಾಹಾಕಾರದಿಂದ ಬಸವಳಿದಿರುವ ಗ್ರಾಮಸ್ಥರಿಗೆ ನೀರು ಪೂರೈಸುವ ಹಾಗೂ ಕೆರೆ, ಬಾವಿಗಳನ್ನು ಜೀರ್ಣೋದ್ಧಾರ ಮಾಡುವ ಕಾರ್ಯದಲ್ಲಿ ಹಗಲಿರುಳು ಶ್ರಮಿಸುತ್ತಿದೆ.
ಬೆಳಗಾವಿ ನಗರದಿಂದ 28 ಕಿಮೀ ದೂರದಲ್ಲಿರುವ ಬೆಳಗಾವಿ ತಾಲೂಕಿನ ಗಜಪತಿ ಗ್ರಾಮದಲ್ಲಿನ ಕೆರೆಯ ಪುನಶ್ಚೇತನದ ಕಾರ್ಯ ಪ್ರಾರಂಭಿಸಿದೆ. ಪ್ಯಾಸ್ ಫೌಂಡೇಷನ್ ಕೈಗೆತ್ತಿಕೊಂಡಿರುವ ಪ್ರಸಕ್ತ ವರ್ಷದ 3ನೇ ಯೋಜನೆಯಾಗಿರುವ ಗಜಪತಿ ಗ್ರಾಮವು ಸುಮಾರು 2,600 ಜನಸಂಖ್ಯೆ, 500 ಜಾನುವಾರು ಹೊಂದಿದೆ. ಆಳದಲ್ಲಿ ನೀರು ನಿಲ್ಲದ ಕಾರಣ ಬೇಸಿಗೆಯಲ್ಲಿ ಕೆರೆ ಬತ್ತಿ ಹೋಗಿತ್ತು. ಪ್ಯಾಸ್ ಫೌಂಡೇಷನ್ 6.4 ಎಕರೆ ವಿಸ್ತೀರ್ಣದ ಕೆರೆಯನ್ನು 6 ಅಡಿ ಆಳ ಹೆಚ್ಚಿಸುವ ಮೂಲಕ ಪುನರುಜ್ಜೀವನಗೊಳಿಸುತ್ತಿದೆ. ಜೂನ್ ಮೊದಲ ವಾರದೊಳಗೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
 ಸಂಪೂರ್ಣ ಮಳೆ ನೀರನ್ನು ಕೊಯ್ಲು ಮಾಡುವ ಗುರಿ ಇದ್ದು, ಅಂತರ್ಜಲ ಹೆಚ್ಚಿಸಲು ಸಾಧ್ಯ. ಸುತ್ತ್ತಲಿನ ಬಾವಿಗಳು ಮತ್ತು ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟಕ್ಕೆ ಗಮನಾರ್ಹ ಏರಿಕೆಯಾಗುತ್ತಿದೆ ಎಂದು ತಿಳಿಸಿದೆ.
ಪ್ಯಾಸ್‌ನ ಸಿಎಸ್‌ಆರ್ ಪಾಲುದಾರರಾದ ಕಿರಣ ಜಿನಗೌಡ, ಬಾಲಚಂದ್ರ ಬದನ ಅವರು ಪುನರುಜ್ಜೀವನ ಕಾರ್ಯಕ್ಕೆ ಪೂಜೆ ನೆರವೇರಿಸಿದರು. ಟೀಮ್ ಪ್ಯಾಸ್‌ನ ಪದಾಧಿಕಾರಿಗಳಾದ ಡಾ. ಪ್ರೀತಿ ಕೋರೆ, ಅವಧೂತ ಸಾಮಂತ, ಸತೀಶ್ ಲಾಡ, ರೋಹನ, ಲಕ್ಷ್ಮೀಕಾಂತ, ಅಭಿಮನ್ಯು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net