

ಬುಧವಾರವೂ ಗಜಪಡೆ ಬೆಳಗ್ಗೆ ಮತ್ತು ಸಂಜೆ ತಾಲೀಮು ನಡೆಸಿತು. ಬೆಳಗ್ಗೆ ಅರಮನೆ ಅಂಗಳದಿಂದ ಆಯುರ್ವೇದ ಆಸ್ಪತ್ರೆ ವೃತ್ತದವರೆಗೆ ಹಾಗೂ ಸಂಜೆ ಅರಮನೆ ಅಂಗಳದಿಂದ ಬನ್ನಿಮಂಟಪದವರೆಗೂ ತಾಲೀಮು ನಡೆಸಿದೆ.
ಸಂಜೆ 5 ಗಂಟೆಗೆ ಸುಮಾರಿಗೆ ಅರಮನೆ ಅಂಗಳದಿಂದ ತಾಲೀಮು ಆರಂಭಿಸಿದ ಗಜಪಡೆ, 6 ಗಂಟೆ ಒಳಗೆ ಬನ್ನಿಮಂಟಪ ತಲುಪಿತು. ಬಳಿಕ ಕೆಲಕಾಲ ಅಲ್ಲಿಯೇ ವಿಶ್ರಾಂತಿ ಪಡೆದು ಬಳಿಕ ಅರಮನೆ ಅಂಗಳಕ್ಕೆ ಹಿಂದಿರುಗಿತು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಭೀಮಾ, ಹೊಸ ಆನೆ ಕಂಜನ್, ಕುಮ್ಕಿ ಆನೆಗಳಾದ ವರಲಕ್ಷ್ಮೀ, ವಿಜಯ ಹಾಗೂ ಗೋಪಿ, ಧನಂಜಯ, ಮಹೇಂದ್ರ ಒಳಗೊಂಡ ಗಜಪಡೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದವು.
ಬೆಳಗಿನ ತಾಲೀಮಿನ ನಂತರ ಎಲ್ಲ ಆನೆಗಳಿಗೂ ಮಾವುತರು ಮತ್ತು ಕಾವಾಡಿಗಳು ಸ್ನಾನ ಮಾಡಿಸಿದರು. ಬಳಿಕ ಹಸಿರುಕಾಳು, ಕುಸುಬಲಕ್ಕಿ, ಉದ್ದಿನಕಾಳು, ಈರುಳ್ಳಿ, ಗೋಧಿ, ಅವಲಕ್ಕಿ, ತರಕಾರಿ ಮಿಶ್ರಣದ ಆಹಾರ ಸೇವಿಸಿದ ಆನೆಗಳು ಅರಮನೆ ಅಂಗಳದಲ್ಲಿ ಸಂಜೆವರೆಗೆ ರಿಲ್ಯಾಕ್ಸ್‌ಗೆ ಜಾರಿದವು. ಸಂಜೆಯ ತಾಲೀಮಿನ ಬಳಿಕ ಗಜಪಡೆಗೆ ಸ್ವಲ್ಪ ಪ್ರಮಾಣದಲ್ಲಿ ಭತ್ತ, ತೆಂಗಿನಕಾಯಿ, ಬೆಲ್ಲ, ಭತ್ತದ ಒಣಹುಲ್ಲಿನ ಜತೆ ಹಿಂಡಿ, ಅಲ್ಪ ಪ್ರಮಾಣದಲ್ಲಿ ಬೆಣ್ಣೆ ನೀಡಲಾಯಿತು.