ರಿಲ್ಯಾಕ್ಸ್ ಮೂಡ್‌ಗೆ ಜಾರಿದ ಗಜಪಡೆ

11 - Copy
Published on

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಯನ್ನು ಯಶಸ್ವಿಯಾಗಿ ಮುಗಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಗುರುವಾರ ಅರಮನೆ ಅಂಗಳದಲ್ಲಿ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದವು.


ಯಶಸ್ವಿಯಾಗಿ ಅಂಬಾರಿ ಹೊತ್ತ ಅಭಿಮನ್ಯು ಹಾಗೂ ಇನ್ನಿತರ ಆನೆಗಳಿಗೆ ಗುರುವಾರ ಬೆಳಗ್ಗೆಯೇ ಸ್ನಾನ ಮಾಡಿಸಲಾಯಿತು. ನಂತರ ಬೆಲ್ಲ, ಕುಸುರೆ, ಸೊಪ್ಪು, ಬೇಯಿಸಿದ ಧಾನ್ಯ ನೀಡಲಾಯಿತು. ಅಭಿಮನ್ಯು ಅರಮನೆ ಆವರಣದಲ್ಲಿ ತನಗಾಗಿಯೇ ನಿರ್ಮಿಸಿರುವ ಶೆಡ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಅರ್ಜುನ, ಗೋಪಾಲಸ್ವಾಮಿ ಗಾಂಭೀರ್ಯದಲ್ಲಿ ಮಲಗಿದ್ದವು. ಇನ್ನು ಧನಂಜಯ, ಭೀಮ ಸೇರಿದಂತೆ ಇತರ ಆನೆಗಳು ಜಲ ಮಜ್ಜನದಲ್ಲಿ ಮುಳುಗಿದ್ದವು.


ಮಾವುತ, ಕಾವಾಡಿಗಳು ಆನೆಗಳ ಆರೈಕೆಯಲ್ಲಿ ತೊಡಗಿದ್ದರೆ, ಜತೆಯಲ್ಲಿ ಬಂದಿರುವ ಅವರ ಕುಟುಂಬದ ಸದಸ್ಯರು ಮರಳಿ ಕಾಡಿಗೆ ತೆರಳಲು ವಸ್ತುಗಳನ್ನು ಕಟ್ಟಿಕೊಳ್ಳುವ, ಬಟ್ಟೆ ಸ್ವಚ್ಛಗೊಳಿಸಿಕೊಳ್ಳುವುದರಲ್ಲಿ ಮಗ್ನವಾಗಿದ್ದರು.


ಮಾವುತ ಮತ್ತು ಕಾವಾಡಿಗಳ ಕೆಲ ಮಕ್ಕಳು ಟೆಂಟ್ ಶಾಲೆಗೆ ಹೋಗಿದ್ದರೆ, ಇನ್ನೂ ಕೆಲವರು ಅರಮನೆ ಆವರಣದಲ್ಲಿ ಆಟವಾಡುತ್ತ ಜಾಲಿ ಮೂಡ್‌ನಲ್ಲಿ ಇದ್ದರು. ಆನೆಗಳಿಗೆ ಸ್ನಾನ ಮಾಡಿಸಿ, ಅವುಗಳ ಬೆನ್ನೇರಿ ಸವಾರಿ ಮಾಡುತ್ತಿದ್ದ ದೃಶ್ಯ ಅರಮನೆ ಆವರಣದಲ್ಲಿ ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net