ಯಲ್ಲಾಪುರ ಭಾಗದಲ್ಲಿ ಬೀಡುಬಿಟ್ಟ ಗಜಪಡೆ

YLP ELEPANT DALI
Published on

ಯಲ್ಲಾಪುರ: ತಾಲೂಕಿನ ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಕಾಡಾನೆ ಹಾವಳಿ ವಿಪರೀತವಾಗಿದ್ದು, ಬೆಳೆ ನಷ್ಟದ ಮುನ್ನುಡಿ ಬರೆದಿದೆ.

ಮದನೂರು ಗ್ರಾಪಂ ವ್ಯಾಪ್ತಿಯ ಮದನೂರು, ಅಲ್ಕೇರಿ, ಖಂಡ್ರನಕೊಪ್ಪ, ಮಾದೇವಕೊಪ್ಪ ಮುಂತಾದ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಕಾಡಾನೆಗಳು ಬೀಡು ಬಿಟ್ಟಿವೆ. ರಾತ್ರಿ ವೇಳೆ ರೈತರ ಕೃಷಿ ಭೂಮಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

ಆನೆಗಳು ಭತ್ತ, ಕಬ್ಬು, ಗೋವಿನಜೋಳ, ಬಾಳೆ, ಅಡಕೆ ಮುಂತಾದ ಗಿಡ, ಬೆಳೆಯನ್ನು ನಾಶ ಮಾಡುತ್ತಿವೆ. 4-5 ಆನೆಗಳಿರುವ 2 ಪ್ರತ್ಯೇಕ ಗುಂಪು 15 ದಿನಗಳಿಂದಲೂ ಈ ಭಾಗದಲ್ಲೇ ಓಡಾಡುತ್ತಿವೆ. ಈಗಾಗಲೇ ರೈತರ ನೂರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆಯನ್ನು ಹಾಳು ಮಾಡಿವೆ. ಈ ಬಾರಿ ಅತಿಯಾದ ಮಳೆಯಿಂದಾಗಿ ಬೆಳೆ ನಷ್ಟ ಉಂಟಾಗುವುದು ನಿರೀಕ್ಷಿತವೇ ಆಗಿದೆ. ಇದರೊಂದಿಗೆ ಆನೆ ಹಾವಳಿಯಿಂದ ಇದ್ದ ಬೆಳೆಯನ್ನೂ ಕಳೆದುಕೊಳ್ಳುವ ಆತಂಕ ರೈತರದಾಗಿದೆ. ರಾತ್ರಿ ವೇಳೆ ಗದ್ದೆ, ತೋಟಗಳಿಗೆ ನುಗ್ಗುವ ಆನೆಗಳನ್ನು ಓಡಿಸುವುದು ಹೇಗೆ ಎಂಬ ದಾರಿ ಕಾಣದೇ ರೈತರು ಕಂಗಾಲಾಗಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕು. ಆನೆಗಳ ಹಾವಳಿ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಆನೆಗಳ ಹಾವಳಿ ನಿಯಂತ್ರಣಕ್ಕಾಗಿ ರೈತರಿಗೆ ಐಬೆಕ್ಸ್ ಬೇಲಿ, ಗರ್ನಾಲ್, ಪಟಾಕಿ, ಬ್ಯಾಟರಿ ವ್ಯವಸ್ಥೆಯನ್ನು ಇಲಾಖೆ ಮಾಡಬೇಕು ಎಂಬ ಆಗ್ರಹ ಸ್ಥಳೀಯ ರೈತರದ್ದಾಗಿದೆ.</p><p>-----

ಪ್ರತಿ ವರ್ಷವೂ ಈ ಸಮಯದಲ್ಲಿ ಆನೆಗಳ ಹಾವಳಿ ತಪ್ಪಿದ್ದಲ್ಲ. ಇದನ್ನು ನಿಯಂತ್ರಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು. ಬೆಳೆ ನಷ್ಟ ಉಂಟಾದ ರೈತರಿಗೆ ಶೀಘ್ರ ಸೂಕ್ತ ಪರಿಹಾರ ಒದಗಿಸಬೇಕು.

| ಜಾನು ಕೊಕರೆ, ರೈತ

ಕಿರವತ್ತಿ, ಮದನೂರು ಭಾಗದಲ್ಲಿ ಕಾಡಾನೆಗಳ ಓಡಾಟ ಪ್ರತಿ ವರ್ಷವೂ ಸಾಮಾನ್ಯ. ನಿಯಂತ್ರಣಕ್ಕೆ ಇಲಾಖೆ ಕಾರ್ಯಾಚರಣೆ ನಡೆಸಲಿದೆ. ಬೆಳೆ ನಷ್ಟಕ್ಕೊಳಗಾದ ಅರ್ಹ ರೈತರಿಗೆ ಪರಿಹಾರ ನೀಡುವ ಕಾರ್ಯವೂ ಇಲಾಖೆಯಿಂದ ಆಗಲಿದೆ. 

| ಹರ್ಷ ಭಾನು, ಡಿಸಿಎಫ್ ಯಲ್ಲಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net