ಗಜಾನನ ಮಹಾಲೆ ಕಾರ್ಯ ಸದಾ ಸ್ಮರಣೀಯ

21 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಹುಮುಖ ವ್ಯಕ್ತಿತ್ವ ಹೊಂದಿದ್ದ ಗಜಾನನ ಮಹಾಲೆ ಅವರು ನಾಟಕ, ನೃತ್ಯ, ಚಿತ್ರಕಲೆ ಹಾಗೂ ಸಂಗೀತದಲ್ಲಿ ಅಪಾರ ಆಸಕ್ತಿಯಿಂದ ಪ್ರಸಾದನ ಕಲೆಯಲ್ಲಿ ತೊಂಡಗಿದ್ದರು. ಪ್ರಸಾದನ ಕಲೆಯಲ್ಲಿ ಪಾತ್ರಗಳಿಗೆ ಜೀವ ತುಂಬುತ್ತಾ ಮುನ್ನಡೆಯುತ್ತಿದ್ದರು ಎಂದು ಆಕಾಶವಾಣಿ ವಿಶ್ರಾಂತ ನಿಲಯ ನಿರ್ದೇಶಕ ಡಾ. ಚೇತನ ನಾಯಕ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಗಜಾನನ ಮಹಾಲೆ ದತ್ತಿ ನಿಮಿತ್ತ ಶನಿವಾರ ಆಯೋಜಿಸಿದ್ದ ದೇವರ ಹೆಣ (ಹಸಿವೆಂಬ ಹಸಿವು) ನಾಟಕ ಪ್ರದರ್ಶನ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿರಿಯ ರಂಗಕರ್ಮಿಗಳಿಂದ ಪ್ರೇರಣೆ ಪಡೆದ ಗಜಾನನ ಮಹಾಲೆ, ರಾಜ್ಯದ ರಂಗ ಕಲಾವಿದರಿಗೆ ಚಿರಪರಿಚಿತರು. ಜೀವನದ ಅಂತ್ಯದವೆರೆಗೂ ತಮ್ಮ ಮನೆತನದ ವೃತ್ತಿ ಕ್ಷೌರಿಕತನ ಬಿಟ್ಟು ಕೊಟ್ಟಿರಲಿಲ್ಲ. ಇಂತಹ ಮಹಾನ್ ವ್ಯಕ್ತಿ ಹೆಸರಿನಲ್ಲಿ ರಂಗ ಶಾಲೆ ನಿರ್ಮಿಸುವುದು ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಬಡತನದಲ್ಲಿ ಬೆಳೆದ ಗಜಾನನ ಮಹಾಲೆ, ನಾಡು ಕಂಡ ಅಪರೂಪದ ವ್ಯಕ್ತಿತ್ವ ಹೊಂದಿದವರಾಗಿದ್ದರು. ಪ್ರಸಾದನ ಕಲೆಯಿಂದ ಜನಪ್ರಿಯರಾಗಿದ್ದರು ಎಂದರು.
ಅಪೂರ್ವ ಮಹಾಲೆ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ಎಸ್.ಎಂ. ದಾನಪ್ಪಗೌಡರ, ಕೆ.ಎಂ. ಅಂಗಡಿ, ಬಿ.ಜಿ. ಬಾರ್ಕಿ, ಎಂ.ಎಂ. ಚಿಕ್ಕಮಠ, ಕೆ.ಎಚ್. ನಾಯಕ, ಪ್ರಮೀಳಾ ಜಕ್ಕಣ್ಣವರ, ಶರಣಪ್ಪ ಮೆಣಸಿನಕಾಯಿ, ಗಜಾನನ ಮಹಾಲೆ ಕುಟುಂಬಸ್ಥರು, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಬಿ.ಐ. ಈಳಿಗೇರ ವಂದಿಸಿದರು. ನಂತರ ಗಜಾನನ ಮಹಾಲೆ ಕಲಾ ಪ್ರತಿಷ್ಠಾನ ಹಾಗೂ ಸಮುದಾಯ ಧಾರವಾಡ ವತಿಯಿಂದ ಡಾ. ಕುಂ. ವೀರಭದ್ರಪ್ಪ ರಚಸಿದ ವಾಸುದೇವ ಗಂಗೇರ ನಿರ್ದೇಶನದ ‘ದೇವರ ಹೆಣ’ ನಾಟಕ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net