

ಬ್ಯಾಡಗಿ: ಪಟ್ಟಣದ ಗಜಾನನ ಬ್ಯಾಂಕ್ ಶತಮಾನ ಪೂರೈಸಲು ಗ್ರಾಹಕರ ಪ್ರಾಮಾಣಿಕ ವ್ಯವಹಾರ ಹಾಗೂ ಆಡಳಿತ ಮಂಡಳಿ, ಸಿಬ್ಬಂದಿ ಕ್ರಿಯಾಶೀಲ ಕಾರ್ಯದಿಂದ ಸಾಧ್ಯವಾಗಿದೆ. ಸಾರ್ವಜನಿಕರಿಗೆ ಅಗತ್ಯ ಆರ್ಥಿಕ ಸೇವೆ ಒದಗಿಸುವ ಮೂಲಕ ಉತ್ತಮ ಸಹಕಾರಿ ಬ್ಯಾಂಕ್ ಪಟ್ಟಿಯಲ್ಲಿದೆ ಎಂದು ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಹೇಳಿದರು.
ಇಲ್ಲಿನ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಗಜಾನನ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ನ 106ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
ನೂರು ವರ್ಷಗಳ ಹಿಂದೆ ಬ್ಯಾಡಗಿಯಲ್ಲಿ ಗಜಾನನ ಬ್ಯಾಂಕ್ ಮೂಲ ಶಾಖೆ ಆರಂಭಿಸಿದಾಗ ಬೆಳರಣಿಕೆಯಷ್ಟು ಜನ ಷೇರುದಾರರಿದ್ದರು. ಈಗ 3344 ಶೇರು ಸದಸ್ಯರನ್ನು ಹೊಂದಿದ್ದು ನೂರಾರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಭಾರತೀಯ ರಿಜರ್ವ್ ಬ್ಯಾಂಕ್ ಹಾಗೂ ಆರ್ಥಿಕ ಇಲಾಖೆ ನಿರ್ದೇಶನ ಹಾಗೂ ನಿಯಮಗಳಿಗೆ ಒಳಪಟ್ಟು ವ್ಯವಹಾರ ನಡೆಸುತ್ತಿದೆ. ಸ್ಪರ್ಧಾತ್ಮಕ ಸನ್ನಿವೇಶದಲ್ಲಿಯೂ ಬ್ಯಾಂಕ್ಗೆ ಸಾಕಷ್ಟು ಠೇವಣಿ ಸಂಗ್ರಹವಾಗುತ್ತಿದೆ ಎಂದರು.
ಬ್ಯಾಂಕ್ ಸಂಪೂರ್ಣ ಗಣಕೀಕರಣ, ಕೋರ್ ಬ್ಯಾಂಕಿಂಗ್ ವ್ಯವಸ್ಥೆಗಳ ಅಳವಡಿಕೆಯಿಂದ ಗ್ರಾಹಕರಿಗೆ ಮತ್ತು ಸದಸ್ಯರಿಗೆ ಉತ್ತಮ ಸೇವೆ ಒದಗಿಸುತ್ತಿದೆ. ರಾಣೆಬೆನ್ನೂರಲ್ಲಿ ಎರಡನೇ ಶಾಖೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ರಾಜ್ಯದಲ್ಲಿ ಅತಿಹೆಚ್ಚು ವಹಿವಾಟು ನಡೆಸುವ ಮೂಲಕ ಹೆಚ್ಚು ಶುಲ್ಕ ಸಂಗ್ರಹಿಸಿದೆ. ಈ ಹಿಂದೆ ಇದ್ದ 30 ಕೋಟಿ ರೂ. ಮೆಣಸಿನಕಾಯಿ ವಹಿವಾಟು, ಪ್ರಸಕ್ತ ಸಾಲಿನಲ್ಲಿ 3 ಸಾವಿರ ಕೋಟಿ ರೂ. ದಾಟಿದೆ. ಇಲ್ಲಿ 32ಕ್ಕೂ ಮೆಣಸಿನಕಾಯಿ ಶಿತಲೀಕರಣ ಘಟಕ (ಕೋಲ್ಡ್ ಸ್ಟೋರೇಜ್) ಕಾರ್ಯನಿರ್ವಹಿಸುತ್ತಿವೆ. ಒಟ್ಟಾರೆ ಬ್ಯಾಡಗಿಯಲ್ಲಿ ಆರ್ಥಿಕ ವಹಿವಾಟು ಹೆಚ್ಚಲು ಮಾರುಕಟ್ಟೆ ಹಾಗೂ ಬ್ಯಾಂಕ್ಗಳ ಸಹಕಾರವೂ ಇದೆ ಎಂದರು.
ಸದಸ್ಯರೊಬ್ಬರು ಸಭೆಯಲ್ಲಿ ಷೇರುದಾರರ ಮಕ್ಕಳಿಗೆ ಯಾವುದೇ ಆದಾಯ ಮಿತಿ ಹೇರದೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಎಲ್ಲ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಸನ್ಮಾನಿಸುವಂತೆ ಮನವಿ ಮಾಡಿದರು. ಇದಕ್ಕೆ ಸಭೆಯಲ್ಲಿದ್ದ ಆಡಳಿತ ಮಂಡಳಿ ಸದಸ್ಯರು, ರ್ಚಚಿಸಿ ನಿರ್ಣಯ ತೆಗೆದುಕೊಳ್ಳುವ ಭರವಸೆ ನೀಡಿದರು.
ಆಡಳಿತ ಮಂಡಳಿ ಸದಸ್ಯರಾದ ಸತೀಶ ಪಾಟೀಲ, ಎಸ್.ಜೆ. ಪಾಟೀಲ, ಅಂಬಾಲಾಲ್ ಜೈನ, ಅಶೋಕ ಹೊಟ್ಟಿಗೌಡ್ರ, ಜಗದೀಶ ಹುಗ್ಗಿ, ಬಿ.ಎಂ. ತುಮರಿಕೊಪ್ಪ, ಗಜಾನನ ರಾಯ್ಕರ, ಗಂಗಾಂಬಿಕೆ ಪಾಟೀಲ, ಸಾವಿತ್ರಾ ಪಾಟೀಲ, ಜಿ.ಡಿ. ಹೊನ್ನಮ್ಮನವರ, ಎಫ್.ಎಂ. ಮುಳಗುಂದ, ಎಂ.ಕೆ. ವೀರನಗೌಡ್ರ ವ್ಯವಸ್ಥಾಪಕ ಎಸ್.ಜೆ. ಬ್ಯಾಡಗಿ, ಎಂ.ಸಿ. ಪಾಟೀಲ ಇತರರಿದ್ದರು.