ಬಂಡೀಪುರ ಪಶು ವೈದ್ಯನಿಗೆ ‘ಗಜಗೌರವ’

dr.vaseem mirja
Published on

ಚಾಮರಾಜನಗರ: ವಿದ್ಯುತ್ ಸ್ಪರ್ಶಿಸಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಆನೆಗೆ ಚಿಕಿತ್ಸೆ ನೀಡಿ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಪಶುವೈದ್ಯ ಡಾ.ವಸೀಂ ಮಿರ್ಜಾ ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ಗಜಗೌರವ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2022ರಿಂದ ಈ ಪ್ರಶಸ್ತಿ ನೀಡುತ್ತಿದೆ. ಆನೆಗಳ ಸಂರಕ್ಷಣೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಅಧಿಕಾರಿ, ಸಿಬ್ಬಂದಿ, ಮಾವುತರು, ಕಾವಾಡಿಗಳನ್ನು ಗುರುತಿಸಿ ಪ್ರತಿವರ್ಷ ವಿಶ್ವ ಆನೆ ದಿನಾಚರಣೆಯಂದು (ಆ.12) ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕಳೆದ ವರ್ಷ ತಮಿಳುನಾಡಿನ ಅನಮಲೈ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಮಲಸಾರ್ ಬುಡಕಟ್ಟು ಸಮಾಜದ ಮಾವುತರಾದ ಮಣಿ, ಪಳನಿರಾಜು, ಕುಮಾರ್ ಮತ್ತು ಕಾವಾಡಿಗಳಾದ ಪ್ರಸಾದ್, ಕಣ್ಣನ್ ಅವರನ್ನು ‘ಗಜಗೌರವ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

ಶ್ಲಾಘಸಿದ್ದ ಪ್ರಧಾನಿ ಮೋದಿ:
ಬಂಡೀಪುರದ ಓಂಕಾರ್ ಅರಣ್ಯ ವಲಯ ವ್ಯಾಪ್ತಿಯಲ್ಲಿರುವ ಬರಗಿ ಗ್ರಾಮದ ಖಾಸಗಿ ಜಮೀನಿನಲ್ಲಿ ಬೆಳೆ ರಕ್ಷಣೆಗಾಗಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಇಲ್ಲಿಗೆ ಆಹಾರ ಅರಸಿ ಬಂದಿದ್ದ ಸುಮಾರು 30 ವರ್ಷದ ಹೆಣ್ಣಾನೆಗೆ ವಿದ್ಯುತ್ ಸ್ಪರ್ಶಿಸಿ ನೆಲಕ್ಕುರಳಿ ಒದ್ದಾಡಿತ್ತು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಆನೆ ರಕ್ಷಣೆಗೆ ಇನ್ನಿಲ್ಲದ ಕಸರತ್ತು ನಡೆಸಿದರು. ಅರೆ ಜೀವವಾಗಿ ಬಿದ್ದಿದ್ದ ಆನೆಗೆ ಡಾ.ವಸೀಂ ಮಿರ್ಜಾ ಸತತ 4 ಗಂಟೆ ಚಿಕಿತ್ಸೆ ನೀಡಿದ್ದರು. ಇದರಿಂದ ಚೇತರಿಸಿಕೊಂಡ ಆನೆ ಕಾಡಿನತ್ತ ತೆರಳಿತು. ಆ ಸಂದರ್ಭದ ಫೋಟೋ, ವಿಡಿಯೋಗಳನ್ನು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಟ್ವೀಟ್ ಮಾಡಿ ಅಧಿಕಾರಿಗಳ ಕಾರ್ಯವನ್ನು ಶ್ಲಾಸಿದ್ದರು. ಸಚಿವರ ಟ್ವೀಟ್ ಅನ್ನು ಮರು ಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಆನೆ ರಕ್ಷಣೆ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದರು.

ವಿದೇಶದಲ್ಲಿ ವ್ಯಾಸಂಗ ಮಾಡಿರುವ ವಸೀಂ:
ಗಜ ಗೌರವಕ್ಕೆ ಪಾತ್ರರಾಗುತ್ತಿರುವ ಡಾ.ವಸೀಂ ಮಿರ್ಜಾ ಮೈಸೂರಿನ ಬನ್ನಿಮಂಟಪದ ನಿವಾಸಿ ದಿ.ಮಿರ್ಜಾ ಮತ್ತು ಅಜೀಜ್ ರಿಜ್ವಾನ್ ದಂಪತಿಯ ಪುತ್ರ. ಮೈಸೂರಿನಲ್ಲೇ ಎಸ್ಸೆಸ್ಸೆಲ್ಸಿ, ಪಿಯುಸಿ ಮುಗಿಸಿದ ಮಿರ್ಜಾ ಅವರು, ಹಾಸನದ ಪಶು ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದರು. ಬಳಿಕ ನ್ಯೂಜಿಲೆಂಡ್‌ನ ಯೂನಿವರ್ಸಿಟಿಯಲ್ಲಿ ಪಶು ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

‘ಗಜ ಗೌರವ’ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ. ವಿದ್ಯುತ್ ಸ್ಪರ್ಶದಿಂದ ಅಸ್ವಸ್ಥಗೊಂಡಿದ್ದ ಕಾಡಾನೆ ರಕ್ಷಣೆಯಲ್ಲಿ ಭಾಗಿಯಾದ ಎಲ್ಲ ಅಧಿಕಾರಿಗಳು, ಸಿಬ್ಬಂದಿಗೆ ಇದರ ಶ್ರೇಯಸ್ಸು ಸಲ್ಲುತ್ತದೆ.-ಡಾ.ವಸೀಂ ಮಿರ್ಜಾ, ಪಶುವೈದ್ಯ, ಬಂಡೀಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net