

ನರೇಗಲ್ಲ: ಮಹಿಳೆಗೆ ಬಾಹ್ಯ ಸೌಂದರ್ಯಕ್ಕಿಂತ ಅಂತರಂಗದ ಸೌಂದರ್ಯ ಬಹಳ ಮುಖ್ಯ. ಬಾಹ್ಯ ಸೌಂದರ್ಯ ಸರಿಯಿಲ್ಲವೆಂದು ಖಿನ್ನತೆಗೆ ಒಳಗಾಗದೆ, ಅಂತರಂಗದ ಸೌಂದರ್ಯವನ್ನು ಬೆಳೆಸಿಕೊಂಡು ಮುನ್ನಡೆದರೆ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೆ ಎಂದು ಶಿಕ್ಷಕಿ ಪ್ರತಿಭಾ ಗಾಣಿಗೇರ ಹೇಳಿದರು.
ನರೇಗಲ್ಲ-ಕೋಡಿಕೊಪ್ಪದ ಶ್ರೀ ಅನ್ನದಾನೇಶ್ವರ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಮಾಸಿಕ ಶಿವಾನುಭವಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು. ‘ನಮ್ಮಲ್ಲಿ ಅಂತರಂಗದ ಸೌಂದರ್ಯ ಹೆಚ್ಚಾಗಲು ಇಂತಹ ಶಿವಾನುಭವಗೋಷ್ಠಿಗಳು ಬಹಳಷ್ಟು ಸಹಾಯ ಮಾಡುತ್ತವೆ. ಇಲ್ಲಿ ಬರುವ ಅನುಭಾವಿಗಳ ಅನುಭವದ ಮಾತುಗಳು ನಮ್ಮಲ್ಲಿನ ದೋಷಗಳನ್ನು ಹೊಡೆದೋಡಿಸಿ ಜ್ಞಾನದ ಬೆಳಕನ್ನು ನೀಡಲು ಸಹಾಯಕವಾಗುತ್ತವೆ’ ಎಂದರು.
ಮುಪ್ಪಿನ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಜೀವನದ ಪ್ರತಿ ಕ್ಷಣವೂ ಅಮೂಲ್ಯವಾಗಿದೆ. ಏನೇ ಕನಸು ನನಸಾಗಬೇಕಾದರೂ ಅದಕ್ಕೆ ಸತತ ಪ್ರಯತ್ನ, ಪ್ರಾಮಾಣಿಕ ಪರಿಶ್ರಮ ಬೇಕು. ಇದು ದೊರಕಬೇಕಾದರೆ ಜ್ಞಾನ ಬೇಕು. ಜ್ಞಾನದಿಂದ ಕಾರ್ಯ ಮಾಡುವ ಮನುಷ್ಯ ಎಂದಿಗೂ ಸಶಕ್ತನಾಗಿರುತ್ತಾನೆ. ಸಣ್ಣ ಮನಸನ್ನು ಹೊಂದಿದವರು ಜೀವನದಲ್ಲಿ ಎಂದಿಗೂ ಮುಂದೆ ಬರಲು ಸಾಧ್ಯವಿಲ್ಲ ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಎನ್. ಆರ್. ಗೌಡರ, ಮುಖ್ಯ ಶಿಕ್ಷಕ ಸಂಗಯ್ಯ ಪ್ರಭುಸ್ವಾಮಿಮಠ, ಎಸ್.ಎನ್. ಹೂಲಗೇರಿ, ಉಪನ್ಯಾಸಕ ಎಫ್. ಎನ್. ಹುಡೇದ ಇತರರಿದ್ದರು. ಡಾ. ಕಲ್ಲಯ್ಯ ಹಿರೇಮಠ, ಹನಮಂತ ಹಾದಿಮನಿ ನಿರ್ವಹಿಸಿದರು.