

ಲಕ್ಷ್ಮೇಶ್ವರ: ಶೈಕ್ಷಣಿಕ ಜ್ಞಾನ ಮನುಷ್ಯನ ಮೂರನೇ ಕಣ್ಣಾಗಿದ್ದು, ಉನ್ನತ ಗುರಿ ಸಾಧನೆಗಾಗಿ ವಿದ್ಯಾರ್ಥಿ ದಿಸೆಯಲ್ಲಿಯೇ ಸತತಾಭ್ಯಾಸ, ಶಿಸ್ತು, ಬದ್ಧತೆಯೊಂದಿಗೆ ಜ್ಞಾನ ಸಂಪತ್ತು ಗಳಿಸಬೇಕು ಎಂದು ಮುಂಬೈನ ಝೀ ಎಂಟರ್‌ಟೈನ್ಮೆಂಟ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮುಕುಂದ್ ಗಲಗಲಿ ಹೇಳಿದರು.
ಭಾನುವಾರ ಪಟ್ಟಣದ ಶ್ರೀಮತಿ ಕಮಲಾ ಶ್ರೀ ವೆಂಕಪ್ಪ ಎಂ ಅಗಡಿ ಇಂಜಿನಿಯರಿಂಗ್ ಕಾಲೇಜಿನ 21ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ದೇಶದ ಅಭಿವೃದ್ಧಿಯಲ್ಲಿ ಪ್ರತಿಭಾನ್ವಿತ, ಕೌಶಲವುಳ್ಳ ಇಂಜಿನಿಯರ್‌ಗಳ ಪಾತ್ರ ಪ್ರಮುಖವಾಗಿದೆ. ತಾಂತ್ರಿಕ ಶಿಕ್ಷಣದಲ್ಲಿ ಹೊಸ ಸಂಶೋಧನೆ ಮತ್ತು ಅವಿಷ್ಕಾರ ಮೂಲಕ ದೇಶದ ಅಭಿವೃದ್ಧಿ ಪೂರಕವಾದ ಕಾರ್ಯಗಳನ್ನು ಮಾಡಬೇಕು. ವಿದ್ಯಾರ್ಥಿಗಳು ಜೀವನದ ಉನ್ನತಿ ಮತ್ತು ಪ್ರಗತಿಯ ರೂವಾರಿಗಳಾಗಿದ್ದು, ಆಯ್ದ ವಿಭಾಗದಲ್ಲಿ ಶ್ರದ್ಧೆ, ಸ್ಪಷ್ಟ ಗುರಿಯೊಂದಿಗೆ ಪರಿಶ್ರಮ ಪಟ್ಟರೆ ಯಶಸ್ಸು ಲಭಿಸುತ್ತದೆ. ತಂದೆ ತಾಯಿ, ಗುರು ಮತ್ತು ಕಾಲೇಜಿಗೆ ಉತ್ತಮ ಹೆಸರನ್ನು ತರಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಮಾಹಿತಿ-ತಂತ್ರಜ್ಞಾನದ ಶಿಕ್ಷಣ ಸಿಗಬೇಕೆಂಬ ಸದುದ್ದೇಶದಿಂದ ಹುಟ್ಟೂರಿನಲ್ಲಿ ಸ್ಥಾಪಿಸಿದ ಇಂಜಿನಿಯರಿಂಗ್ ಕಾಲೇಜಿನ ವಿವಿಧ ವಿಭಾಗಗಳಲ್ಲಿ 1400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಸಿಸುತ್ತಿರುವುದು ಹೆಮ್ಮೆಯ ಸಂಗತಿ. ಅಲ್ಲದೆ ಆಸ್ಪತ್ರೆ, ದೇವಸ್ಥಾನ ನಿರ್ಮಿಸಿರುವ ಅಗಡಿ ಕುಟುಂಬದ ಕಾರ್ಯ ಪ್ರಶಂಸನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಚೇರ‌್ಮನ್ ಹರ್ಷವರ್ಧನ ವಿ ಅಗಡಿ ಮಾತನಾಡಿ, ಸಾಧನೆ ಸಾಧಕರ ಸ್ವತ್ತಾಗಿದ್ದು, ಅಬ್ದುಲ್ ಕಲಾಂ, ನರೇಂದ್ರ ಮೋದಿಯವರನ್ನು ಪ್ರೇರಣೆಯಾಗಿಸಿಕೊಂಡು ದೇಶವೇ ಗುರುತಿಸುವಂತಹ ಸಾಧನೆಯ ತುಡಿತದತ್ತ ವಿದ್ಯಾರ್ಥಿಗಳು ಚಿತ್ತ ಹರಿಸಬೇಕು. ಜೀವನ ಸರಳ ದಾರಿಯಲ್ಲ. ಸ್ಪರ್ಧಾತ್ಮಕ ಮತ್ತು ಡಿಜಿಟಲ್ ಯುಗದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ, ಹೊಸ ಅವಿಷ್ಕಾರಗಳ ಕಲ್ಪನೆ ಮತ್ತು ಇಂಗ್ಲಿಷ್ ಭಾಷೆಯ ಜ್ಞಾನ ಅಗತ್ಯವಾಗಿದೆ. ಕೀಳರಿಮೆ ಮರೆತು ಆತ್ಮವಿಶ್ವಾಸ ಹೊಂದಬೇಕು. ಪಿಯು ಕಾಲೇಜಿಗೆ ಪ್ರತ್ಯೇಕ ಕಟ್ಟಣ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದ್ದು ಮುಂದಿನ ದಿನಗಳಲ್ಲಿ ಹೈಸ್ಕೂಲ್ ಶಿಕ್ಷಣವನ್ನೂ ಪ್ರಾರಂಭಿಸಲಾಗುವುದು ಎಂದರು.
ಕಾಲೇಜಿನ ನಿರ್ದೇಶಕರಾದ ಗೀತಾ ಎಚ್. ಅಗಡಿ, ಸಮೀರಾನಂದ ಅಗಡಿ, ಟ್ರಸ್ಟಿ ಶಿಶಿರ ದೇಸಾಯಿ ಮಾತನಾಡಿದರು.ದೇಶ-ವಿದೇಶಗಳ ಪ್ರತಿಷ್ಠಿತ ಕಂಪನಿಗಳು ಕೊಡಮಾಡಿದ ಪ್ರತಿಭಾ ಶಿಷ್ಯವೇತನ ಮತ್ತು ಪಾರಿತೋಷಕ ವಿತರಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ. ಪಿಯು ಕಾಲೇಜಿನ ಪ್ರಾಚಾರ್ಯ ಡಾ.ಎನ್. ಹಯವದನ, ಅಗಡಿ ಸನ್‌ರೈಸ್ ಆಸ್ಪತ್ರೆಯ ಡಾ. ರಾಜಶೇಖರ ಮೂಲಿಮನಿ ವಾರ್ಷಿಕ ವರದಿ ವಾಚಿಸಿದರು. ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ಪಾಲಕರು, ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಅನೇಕ ಪ್ರೊಜೆಕ್ಟ್‌ಗಳ ಪ್ರದರ್ಶನ ನಡೆಯಿತು. ವಿದ್ಯಾರ್ಥಿನಿಯರಾದ ದಿವ್ಯಶ್ರೀ, ನಿಶಾ, ಶ್ರೀಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.