

ರಟ್ಟಿಹಳ್ಳಿ: ದೇವಾಲಯಕ್ಕಿಂತ ಹೆಚ್ಚು ಮಹತ್ವವಾದ ಸ್ಥಾನ ಪಡೆದಿರುವುದು ಗ್ರಂಥಾಲಯವಾಗಿದೆ. ಜ್ಞಾನ ಸಂಪಾದನೆಗೆ ಗ್ರಂಥಾಲಯವು ಸಹಕಾರಿಯಾಗಲಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಮಕರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 1 ಲಕ್ಷ ರೂಪಾಯಿ ಮತ್ತು ಹಳೆಯ 50 ವಿದ್ಯಾರ್ಥಿಗಳ ಸಹಾಯದಿಂದ ನಿಮಾಣವಾದ ವಿ.ಕೃ. ಗೋಕಾಕ ಗ್ರಂಥಾಲಯ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಜಾತಿ, ಮತ, ಸ್ಥಾನಮಾನದ ಭೇದ-ಭಾವವಿಲ್ಲದೇ ಪ್ರತಿಯೊಬ್ಬರೂ ಗ್ರಂಥಾಲಯಕ್ಕೆ ಬಂದು ಪುಸ್ತಕಗಳನ್ನು ಅಧ್ಯಯನ ಮಾಡಿ ಜ್ಞಾನ ಸಂಪಾದಿಸಬಹುದು. ಈ ಗ್ರಂಥಾಲಯಕ್ಕೆ ಪುಸ್ತಕ ಖರೀದಿಸಲು ವೈಯಕ್ತಿಕವಾಗಿ 10 ಸಾವಿರ ರೂಪಾಯಿ ನೀಡುತ್ತೇನೆ. 2 ತಿಂಗಳಲ್ಲಿ ಶಾಲೆಗೆ ಅವಶ್ಯವಿರುವ ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಮಾಡಲಾಗುವುದು ಎಂದರು.
ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಕ್ಕಳು ಶಿಕ್ಷಣದೊಂದಿಗೆ ಗ್ರಂಥಾಲಯದ ಉಪಯೋಗಿಸಿ ಹೆಚ್ಚಿನ ಜ್ಞಾನ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ಓದುವ ಹವ್ಯಾಸ ರೂಢಿ ಮಾಡಿಕೊಳ್ಳಬೇಕು ಎಂದರು.
ಬಿಇಒ ಶ್ರೀಧರ ಎನ್., ಬಿಆರ್ಸಿ ಸುರೇಶಕುಮಾರ ಎನ್., ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಚ್.ಎಚ್. ಜಾಡರ, ಎಸ್ಡಿಎಂಸಿ ಅಧ್ಯಕ್ಷ ಚಂದ್ರಪ್ಪ ದೊಡ್ಡಮನಿ, ಗ್ರಾಪಂ ಅಧ್ಯಕ್ಷೆ ಲಲಿತಾ ಗಂಗೋಳ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಾಲತೇಶಗೌಡ ಗಂಗೋಳ, ಎಸ್ಡಿಎಂಸಿ ಉಪಾಧ್ಯಕ್ಷೆ ಉಮಾ ಕೊಪ್ಪದ, ಗ್ರಾಪಂ ಸದಸ್ಯರಾದ ಸುರೇಶ ಬ್ಯಾಡಗಿ, ಸುಮಾ ನಿಂಬೆಗುಂದಿ, ಸುಧಾ ನಾಗೇನಹಳ್ಳಿ, ಈಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಗಣೇಶ ಬಣಕಾರ, ಒಕ್ಕೂಟದ ಅಧ್ಯಕ್ಷೆ ಮಂಜುಳಾ ನಾಡರ, ಹಳೆಯ ವಿದ್ಯಾರ್ಥಿಗಳಾದ ವಿ.ಎಚ್. ನಾಡರ, ಸುನೀಲ ಡಿ.ಪಿ, ಮಹ್ಮದ್ಶಫೀ ದೊಡ್ಮನಿ, ಶಂಭು ಗಂಗೋಳ, ಮಾಲತೇಶ ಭಜಂತ್ರಿ, ರವೀಂದ್ರ ದಂಡಗೀಹಳ್ಳಿ, ಬಸವರಾಜ ಬಸನಾಳ, ಮುಖ್ಯ ಶಿಕ್ಷಕ ರಾಜು ಹರವಿಶೆಟ್ಟರ್ ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕಿ ಕೆ.ಎಚ್. ಮುದಿಗೌಡರ, ಶಿಕ್ಷಕ ನಟರಾಜ ಎಂ., ಎಸ್.ಎಂ. ಮುತ್ತಗಿ ಕಾರ್ಯಕ್ರಮ ನಿರ್ವಹಿಸಿದರು.