ಗೌಳಿಗರ ಗೋಳು ಕೇಳೋರಿಲ್ಲ

0101
Published on

ಬೆಳಗಾವಿ: ಕರೊನಾ ವೈರಸ್ ಪ್ರಕರಣಗಳು ಹಾಗೂ ಹಾಟ್‌ಸ್ಪಾಟ್ ಕುರಿತು ವದಂತಿಗಳು ಹಬ್ಬುತ್ತಿರುವುದರಿಂದ ಸಾರ್ವಜನಿಕರು ಹಾಲು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬೆಳಗಾವಿ ನಗರದಲ್ಲಿ ಪ್ರತಿದಿನ ನೂರಾರು ಲೀಟರ್ ಚರಂಡಿ ಪಾಲಾಗುತ್ತಿದೆ. ಹಾಲನ್ನೇ ನಂಬಿದ್ದ ಹಲವು ಕುಟುಂಗಳು ಆರ್ಥಿಕ ತೊಂದರೆ ಎದುರಿಸುತ್ತಿವೆ.

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೊಲೀಸರು ಹಾಗೂ ಪಾಲಿಕೆ ಸಿಬ್ಬಂದಿ ಲಾಕ್‌ಡೌನ್ ಪಾಲನೆಗೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ, ಕ್ಯಾಂಪ್ ಹೊರತುಪಡಿಸಿ ಸುತ್ತಮುತ್ತಲಿನ ಪ್ರದೇಶಗಳನ್ನೂ ಕರೊನಾ ಹಾಟ್‌ಸ್ಪಾಟ್ ಪ್ರದೇಶವೆಂದು ಘೋಷಿಸಲಾಗಿದೆ ಎಂಬ ವದಂತಿಯಿಂದ ಟಿಳಕವಾಡಿಯ ಗೌಳಿ ಗಲ್ಲಿಯ ಗೌಳಿ ಕುಟುಂಬಗಳು ಬೀದಿಗೆ ಬಿದ್ದಿವೆ.

ಟಿಳಕವಾಡಿಯ ಗೌಳಿ ಗಲ್ಲಿಯಲ್ಲಿ ಯಾವುದೇ ಕರೊನಾ ವೈರಸ್ ಪಾಸಿಟಿವ್ ಕಂಡು ಬಂದಿಲ್ಲ. ಈ ಪ್ರದೇಶದಲ್ಲಿ ಯಾರನ್ನೂ ಕ್ವಾರಂಟೈನ್‌ಗೆ ಒಳಪಡಿಸಿಲ್ಲ. ಆದರೂ ಕೆಲವರು ಕರೊನಾ ಪಾಸಿಟಿವ್ ಪ್ರದೇಶವೆಂದು ಸುಳ್ಳು ಸುದ್ದಿ ಹರಡಿಸುತ್ತಿದ್ದು, ಇದರಿಂದ ಹೈನೋದ್ಯಮ ನಂಬಿಕೊಂಡಿರುವ ಸುಮಾರು 34ಕ್ಕೂ ಹೆಚ್ಚು ಗೌಳಿ ಕುಟುಂಬಗಳು ಸಮಸ್ಯೆಗೆ ಸಿಲುಕಿವೆ. ಈ ಹಿಂದೆ ಪ್ರತಿದಿನ 600ರಿಂದ 700 ಲೀಟರ್ ಹಾಲು ಮಾರಟವಾಗುತ್ತಿತ್ತು. ಆದರೆ, ಇದೀಗ ಸುಳ್ಳು ಸುದ್ದಿಯಿಂದ ಗ್ರಾಹಕರು ಹಾಲು ಖರೀದಿಗೆ ಹಿಂದೇಟು ಹಾಕುತ್ತಿದ್ದು, ನಿತ್ಯ 150ರಿಂದ 200 ಲೀಟರ್ ಹಾಲು ಚರಂಡಿ ಪಾಲಾಗುತ್ತಿದೆ.

ಬ್ಯಾರಿಕೇಡ್‌ನಿಂದ ರಸ್ತೆ ಬಂದ್: ಕೆಲ ದಿನಗಳಿಂದ ಕರೊನಾ ವೈರಸ್ ಕುರಿತ ವದಂತಿಯಿಂದ ಗೌಳಿ ಗಲ್ಲಿಯಲ್ಲಿ ವಾಸಿಸುತ್ತಿರುವ 90ಕ್ಕೂ ಅಧಿಕ ಕುಟುಂಬಗಳು ಸಮಸ್ಯೆ ಎದುರಿಸುತ್ತಿವೆ. ಹಾಟ್‌ಸ್ಪಾಟ್ ಘೋಷಿಸಿರುವ
ಕ್ಯಾಂಪ್ ಪ್ರದೇಶಕ್ಕೂ ಹಾಗೂ ಗೌಳಿ ಗಲ್ಲಿ ಪ್ರದೇಶಕ್ಕೂ ಯಾವುದೇ ಸಂಬಂಧವಿಲ್ಲ. ಕರೊನಾ ಸೋಂಕು ಹರಡಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ಗೌಳಿ ಗಲ್ಲಿಗೆ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ. ಇದರಿಂದ ಗೌಳಿ ಕುಟುಂಬಗಳು ಗ್ರಾಹಕರಿಗೆ ಹಾಲು ಕೊಡಲು ಪರದಾಡುತ್ತಿವೆ.

ಕರೊನಾ ವೈರಸ್ ಹರಡುವುದನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕೆಲವು ಕಡೆ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಭಾಗ್ಯನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತಿದಿನ ಸುಮಾರು 700 ಲೀಟರ್ ಹಾಲು ಮಾರಾಟ ಮಾಡುತ್ತೇವೆ. ಆದರೆ, ಇದೀಗ ಕ್ಯಾಂಪ್ ಸುತ್ತಮುತ್ತಲಿನ ಪ್ರದೇಶದಲ್ಲೂ ಕರೊನಾ ಸೋಂಕು ಪ್ರಕರಣ ಪತ್ತೆಯಾಗಿವೆ ಎಂಬ ಸುಳ್ಳು ಸುದ್ದಿಯಿಂದ ಅಲ್ಲಿನ ಜನರು ಹಾಲು ಖರೀದಿಸುತ್ತಿಲ್ಲ. ಸರ್ಕಾರ ಗೌಳಿ ಕುಟುಂಬಗಳಿಗೆ ಆರ್ಥಿಕ ನೆರವು ನೀಡಬೇಕು.| ಸಮೀರ್ ಗೌಳಿ ಟಿಳಕವಾಡಿಯ ಗೌಳಿ ಗಲ್ಲಿಯ ನಿವಾಸಿ

| ಜಿತೇಂದ್ರ ಕಾಂಬಳೆ ದಿಗ್ವಿಜಯ ನ್ಯೂಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net