ಸೆ.14, 15ರಂದು ಗಗನಚುಕ್ಕಿ ಜಲಪಾತೋತ್ಸವ: ಸಂಭ್ರಮದ ಕ್ಷಣಕ್ಕೆ ಸಜ್ಜಾಗುತ್ತಿದೆ ಪ್ರವಾಸಿತಾಣ

Gaganachukki waterfall festival Mandya
Published on

ಮಂಡ್ಯ: ಪ್ರಸಿದ್ಧ ಪ್ರವಾಸಿ ತಾಣ ಮಳವಳ್ಳಿ ತಾಲೂಕಿನ ಗಗನಚುಕ್ಕಿಯಲ್ಲಿ ಸೆ.14 ಮತ್ತು 15ರಂದು ಜಲಪಾತೋತ್ಸವ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ಜೋರಾಗಿಯೇ ಸಾಗಿದೆ.
ಬರದಿಂದಾಗಿ ಹಿಂದಿನ ವರ್ಷದಲ್ಲಿ ಜಲಪಾತೋತ್ಸವ ನಡೆದಿರಲಿಲ್ಲ. ಆದರೆ ಈ ಬಾರಿ ಕಾವೇರಿ ಕಣಿವೆಯಲ್ಲಿ ಉತ್ತಮ ಮಳೆಯಾದ ಪರಿಣಾಮ ಗಗನಚುಕ್ಕಿ ಜಲಪಾತ ಮೈದುಂಬಿ ಹರಿಯುತ್ತಿದೆ. ಈ ಸಂಭ್ರಮವನ್ನು ಹೆಚ್ಚಿಸಲು ಎರಡು ದಿನ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯವಾಗಿ ದೂರದಿಂದ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗಲೆಂದು ಎರಡು ದಿನ ಮೂರು ಹೊತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಮಾತ್ರವಲ್ಲದೆ ಸಾರ್ವಜನಿಕರಿಗೆ ಕಲೆಯ ರಸದೌತಣ ಸಿಗಲಿದೆ.
14ರಂದು ಶನಿವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, 2 ಗಂಟೆಯಿಂದ ಸಂಜೆ 4.30 ರವರೆಗೆ ನಾಗೇಶ್ ಕಂದೇಕಾಲಮತ್ತು ಕಲಾವತಿ ದಯಾನಂದ್, ಅಜಯ್ ವಾರಿಯರ್, ಜೋಗಿ ಸುನಿತಾ, ಚಿಂತನ್ ವಿಕಾಸ್, ಸುಹನಾ ಸೈಯದ್ ಅವರಿಂದ ಭಾವಗೀತೆ, 4.30 ರಿಂದ 6 ಗಂಟೆವರೆಗೆ ಕಾಮಿಡಿ ಕಿಲಾಡಿ ಖ್ಯಾತಿಯ ಕಲಾವಿದರಿಂದ ಹಾಸ್ಯ ಮನರಂಜನೆ, 7 ಗಂಟೆಯಿಂದ ರಾತ್ರಿ 10.30 ರವರೆಗೆ ಮಣಿಕಾಂತ್ ಕದ್ರಿ, ಚಂದನ್ ಶೆಟ್ಟಿ, ಹಂಸಿಕಾ ಅಯ್ಯರ್ ತಂಡದವರಿಂದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
15ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, 2 ರಿಂದ ಸಂಜೆ 4.30ರವರೆಗೆ ಜೀ ಕನ್ನಡದ ಸರಿಗಮಪ ತಂಡದವರಿಂದ ಸಂಗೀತ ಕಾರ್ಯಕ್ರಮ, 4.30 ರಿಂದ 6 ಗಂಟೆವರೆಗೆ ಕಲರ್ಸ್ ವಾಹಿನಿಯ ಗಿಚ್ಚಿ ಗಿಲಿಗಿಲಿ ತಂಡದಿಂದ ಹಾಸ್ಯ ಕಾರ್ಯಕ್ರಮ, 6 ರಿಂದ ರಾತ್ರಿ 10.30 ರವರೆಗೆ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಮತ್ತು ತಂಡದವರಿಂದ ಸಂಗೀತ ರಸ ಸಂಜೆ ಇರಲಿದೆ. ವಿಶೇಷವೆಂದರೆ ರವಿ ಬಸ್ರೂರ್ ಅವರು ಮೊದಲ ಬಾರಿಗೆ ಬಹಿರಂಗ ವೇದಿಕೆಯಲ್ಲಿ ನೇರಪ್ರಸಾರದ ಕಾರ್ಯಕ್ರಮ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net