

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ಅಧಿಕವಿದ್ದರೂ ಗದ್ದುಗೆಗೆ ಗುದ್ದಾಟ ಮಾಡುವ ಅನಿವಾರ್ಯ ಎದುರಾಗಿದೆ.
ಒಂದೆಡೆ ಬೇಸಿಗೆ ಬಿಸಿಲಿನ ತಾಪ,ಇನ್ನೊಂದು ಕಡೆ ಪಟ್ಟಣ ಪಂಚಾಯಿತಿ ಚುನಾವಣೆ ಕಾವು ರಂಗೇರಿದೆ. ಪಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಆಯ್ಕೆ ವಿಷಯದಲ್ಲಿ ಕಾಂಗ್ರೆಸ್ ಸದಸ್ಯರು ಹಾಗೂ ಮುಖಂಡರಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ.
ಪಟ್ಟಣ ಪಂಚಾಯಿತಿ 16 ಸದಸ್ಯ ಬಲ ಹೊಂದಿದೆ. 2021 ರಲ್ಲಿ ಜರುಗಿದ ಚುನಾವಣೆಯಲ್ಲಿ ಅಪ್ಪುಗೌಡ ಪಾಟೀಲ (ಮನಗೂಳಿ) ನೇತೃತ್ವದಲ್ಲಿ ಬಿಜೆಪಿಯಿಂದ 12 ಜನ ಸದಸ್ಯರು ಹಾಗೂ ಕಾಂಗ್ರೆಸ್‌ದಿಂದ ನಾಲ್ವರು ಸದಸ್ಯರು ಆಯ್ಕೆಯಾಗಿದ್ದರು. ನಂತರ ಅಪ್ಪುಗೌಡ ಪಾಟೀಲ ಮನಗೂಳಿ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರಿದರು. ಬಿಜೆಪಿಯಿಂದ ಆಯ್ಕೆಯಾದ 12 ಜನ ಸದಸ್ಯರ ಪೈಕಿ 8 ಜನರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಹೀಗಾಗಿ ಕಾಂಗ್ರೆಸ್ ಪಕ್ಷದ ಸದಸ್ಯರ ಬಲ 12ಕ್ಕೆ ಏರಿದೆ. ಎರಡನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ರಾಜ್ಯ ಸರ್ಕಾರ ಮೀಸಲಾತಿ ಘೋಷಣೆ ಮಾಡಿದೆ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಐವರು ಆಕಾಂಕ್ಷಿಗಳಿದ್ದಾರೆ. ಡಾ.ಮಳಸಿದ್ದಪ್ಪ ಮೇತ್ರಿ, ಸತ್ಯವ್ವ ಗಣಿ, ಪ್ರಕಾಶ ಮನಗೂಳಿ, ರಾಮಚಂದ್ರ ಮುದ್ದಾಪುರ (ಪತ್ತಾರ), ಸಲೀಂ ಮಕಾಂದಾರ ಆಕಾಂಕ್ಷಿಗಳಾಗಿದ್ದು, ಇವರಲ್ಲಿ ಯಾರು ಅಧ್ಯಕ್ಷರಾಗುತ್ತಾರೆ ಎಂಬ ಪ್ರಶ್ನೆಗೆ ಸೋಮವಾರ ಉತ್ತರ ಸಿಗಲಿದೆ.
ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಅಪ್ಪುಗೌಡ ಪಾಟೀಲ ( ಮನಗೂಳಿ) ಅವರ ಬೆಂಬಲಿಗರಲ್ಲಿ 4 ಜನ ಪಪಂ ಸದಸ್ಯರಿದ್ದು, ಅವರಲ್ಲಿ ಒಬ್ಬರು ಹಿಂದುಳಿದ ವರ್ಗದವರಿದ್ದಾರೆ. ಅವರು ನಾಮಪತ್ರ ಸಲ್ಲಿಸುತ್ತಾರೋ ಅಥವಾ ಅವಿರೋಧ ಆಯ್ಕೆಗೆ ಸಹಕರಿಸುತ್ತಾರೋ ಕಾದು ನೋಡಬೇಕಿದೆ.