

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಾನಪದ ವಿದ್ವಾಂಸ ಡಾ. ಬಿ.ಎಸ್. ಗದ್ದಗಿಮಠ ದತ್ತಿ, ಡಾ. ಬಿ.ಎಸ್. ಗದ್ದಗಿಮಠ ಹಾಗೂ ಶ್ರೀಮತಿ ಅನಸೂಯಾ ಗದ್ದಗಿಮಠ ಪ್ರತಿಷ್ಠಾನ ಉದ್ಘಾಟನೆ ಹಾಗೂ ಡಾ. ಬಿ.ಎಸ್. ಗದ್ದಗಿಮಠ ಪುಸ್ತಕ ಬಿಡುಗಡೆ ಸಮಾರಂಭವನ್ನು ಜ. 9ರಂದು ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ ಎಂದು ಗದ್ದಗಿಮಠ ಟ್ರಸ್ಟ್ ವ್ಯವಸ್ಥಾಪಕ ಪುಲಕೇಶಿ ಗದ್ದಗಿಮಠ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಅತಿಥಿಗಳಾಗಿ ಆಗಮಿಸುವರು. ಜಾನಪದ ವಿವಿ ಕುಲಪತಿ ಡಾ. ಟಿ.ಎಂ. ಭಾಸ್ಕರ ಜಾನಪದ ಕ್ಷೇತ್ರಕ್ಕೆ ಡಾ. ಬಿ.ಎಸ್. ಗದ್ದಗಿಮಠ ಕೊಡುಗೆ ಕುರಿತು ವಿಶೇಷ ಉಪನ್ಯಾಸ ನೀಡುವರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪ್ರಸಕ್ತ ಸಾಲಿನಿಂದ ದತ್ತಿ ಕಾರ್ಯಕ್ರಮ ಆರಂಭಿಸಿದ್ದು, ಮುಂದಿನ ವರ್ಷದಿಂದ ಗದ್ದಗಿಮಠ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು. ಜಾನಪದ ಸಾಹಿತ್ಯದಲ್ಲಿ ಸಾಧನೆ ಮಾಡಿದ ಪುರುಷರಿಗೆ ಬಿ.ಎಸ್. ಗದ್ದಗಿಮಠ ಹಾಗೂ ಜಾನಪದ ಕಲೆಯಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಅನಸೂಯಾ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗಳು ತಲಾ 25 ಸಾವಿರ ರೂ. ನಗದು, ಸ್ಮರಣಿಕೆ ಒಳಗೊಂಡಿವೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಜಾನಪದ ಸಾಹಿತ್ಯವೂ ಗಂಭೀರ ಅಧ್ಯಯನಕ್ಕೆ ಯೋಗ್ಯ ವಿಷಯ ಎಂದು ತೋರಿಸಿಕೊಟ್ಟು ನಿರಂತರ ಸಂಶೋಧನೆ ಜತೆಗೆ ಜಾನಪದ ಸಾಹಿತ್ಯಕ್ಕೆ ಮೌಲಿಕ ಕೊಡುಗೆ ನೀಡಿದವರು ಬಿ.ಎಸ್. ಗದ್ದಗಿಮಠ. ಇಂತಹ ಮಹಾನ್ ಸಾಧಕರ ಹೆಸರಿನಲ್ಲಿ ದತ್ತಿ ಸ್ಥಾಪನೆ ಮಾಡಿರುವುದು ಸಂತಸದ ಸಂಗತಿ ಎಂದರು.
ಸತೀಶ ತುರಮರಿ, ಶಂಕರ ಕುಂಬಿ, ಡಾ. ನಿಜಗುಣದೇವ ಗದ್ದಗಿಮಠ, ಉಷಾ ಗದ್ದಗಿಮಠ, ಇತರರು ಇದ್ದರು.