ಗದಗ ಬಳಗನೂರು ಕೆರೆ ಪುನಶ್ಚೇತನ

Kere
Published on

ಬೆಳ್ತಂಗಡಿ: ಗದಗ ಬಳಗನೂರು ಕೆರೆ ಪುನಶ್ಚೇತನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ 6.20 ಲಕ್ಷ ರೂ.ಅನುದಾನ ನೀಡಲಾಗಿದ್ದು, ಹೂಳೆತ್ತುವ ಕಾಮಗಾರಿ, ಏರಿ ನಿರ್ಮಾಣ, ಮೆಟ್ಟಿಲು ರಚನೆ ಮಾಡಲಾಗಿದೆ ಯೋಜನೆ ಕಾರ್ಯನಿರ್ವಹಕ ನಿರ್ದೇಶಕ ಡಾ.ಎಲ್.ಎಚ್ ಮಂಜುನಾಥ್ ತಿಳಿಸಿದ್ದಾರೆ.

80 ವರ್ಷಗಳ ಹಿಂದೆ ಗ್ರಾಮದ ಹಿರಿಯರು ನಿರ್ಮಾಣ ಮಾಡಿದ ಈ ಕೆರೆಯಲ್ಲಿ ಗ್ರಾಮ ದೇವತೆಗಳ ಜಳಕ ನಡೆಯುತ್ತಿತ್ತು. ಇತ್ತೀಚಿನ ಕೆಲ ವರ್ಷಗಳಲ್ಲಿ ಹೂಳು ತುಂಬಿ ನೀರಿಲ್ಲದ ಸ್ಥಿತಿ ಏರ್ಪಟ್ಟಿತ್ತು. ಇದರಿಂದ ಬಾವಿಗಳಲ್ಲ್ಲೂ ನೀರು ಬತ್ತಿ, 1400ಕ್ಕೂ ಮಿಕ್ಕಿ ಕುಟುಂಬಗಳು ಬೋರ್‌ವೆಲ್‌ನ ಫ್ಲೋರೈಡ್ ಅಂಶವಿರುವ ನೀರು ಕುಡಿಯುತ್ತಿದ್ದರು. 2018ರಲ್ಲಿ ಸ್ವ-ಸಹಾಯ ಸಂಘ ಕಾರ್ಯಕರ್ತರು ನೀರಿನ ಮಿತ ಬಳಕೆ, ಶುದ್ಧನೀರು ಕುಡಿಯುವ, ಕೆರೆಗಳ ಅಭಿವೃದ್ಧಿ ಯೋಜನೆ ಕುರಿತು ಮಾಹಿತಿ ನೀಡಿದರು. ಗ್ರಾಮಸ್ಥರು ಬಳಗನೂರು ಕೆರೆ ಪುನಶ್ಚೇತನ ಮಾಡಿಕೊಡುವಂತೆ ಯೋಜನಾಧಿಕಾರಿಗಳಿಗೆ ಮನವಿ ಮಾಡಿದ್ದರು. ಕೆರೆ ಅಭಿವೃದ್ಧಿ ಸಮಿತಿ ರಚಿಸಿ 2019ರಲ್ಲಿ ಕಾಮಗಾರಿ ನಡೆಸಲಾಯಿತು. 66 ರೈತರು ಹೂಳು ತೆರವುಗೊಳಿಸಿದ್ದಾರೆ. ಕಳೆದ ಮಳೆಗಾಲದಲ್ಲಿ ನೀರು ತುಂಬಿದ ಪರಿಣಾಮ, ಈಗ 10 ಅಡಿ ನೀರಿದೆ. ಬೋರ್‌ವೆಲ್ ಮತ್ತು ಬಾವಿಗಳಲ್ಲಿ ನೀರು ತುಂಬಿದೆ.

ಬೋರ್‌ವೆಲ್ ನೀರು ಬಳಸಿ 54 ಕುಟುಂಬಗಳು ಹೈನುಗಾರಿಕೆ ಜತೆಗೆ ಗೋಧಿ, ಮೆಣಸು, ಹತ್ತಿ, ಕಾಳು, ಜೋಳ, ಬೆಳೆಗಳನ್ನು ಬೆಳೆಸಿ ಆರ್ಥಿಕ ಸಮಸ್ಯೆಯಿಂದ ಪಾರಾಗಿದ್ದಾರೆ. ಕೆರೆಗೆ ಕಸ ಹಾಕದಂತೆ, ಜಾನುವಾರುಗಳು ಇಳಿಯದಂತೆ ತಡೆಯಲು ಕಾವಲುಗಾರನನ್ನು ನೇಮಿಸಲಾಗಿದೆ. ಕೆರೆಯ ಸುತ್ತ ಗಿಡಗಳನ್ನು ನೆಡಲಾಗಿದೆ ಎಂದು ತಿಳಿಸಿದ್ದಾರೆ.

ನಮ್ಮೂರ ಕೆರೆಯಲ್ಲಿ ಹೂಳು ತುಂಬಿದ್ದರಿಂದ ಕುಡಿಯುವ ನೀರಿನ ಅಭಾವ ತಲೆದೋರಿತ್ತು. ಬಾವಿ, ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿದಿತ್ತು. ಧ.ಗ್ರಾ.ಯೋಜನೆ ವತಿಯಿಂದ ಕೆರೆ ಹೂಳೆತ್ತಿದ ಬಳಿಕ ಸಮಸ್ಯೆ ನಿವಾರಣೆಯಾಗಿದೆ. ಕೆರೆಯ ಹೂಳನ್ನು ಗದ್ದೆಗೆ ತುಂಬಿಸಿದ್ದರಿಂದ ಕೃಷಿಭೂಮಿಯ ಫಲವತ್ತತೆ ಹೆಚ್ಚಿದೆ. ಖಾದರ್ ಬಾಷಾ ಗದಗ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net