ಶಿರೋಳ ಪಿಎಚ್‌ಸಿಗೆ ಎನ್‌ಕ್ಯೂಎಎಸ್ ವಿಶೇಷ ಪ್ರಶಸ್ತಿ: governmet hospital

ಖಾಸಗಿ ಆಸ್ಪತ್ರೆಗಳ ಸೇವೆ ಮೀರಿಸಿದ ಸರ್ಕಾರಿ ಹಾಸ್ಪಿಟಲ್
ನರಗುಂದ ತಾಲೂಕಿನ ಶಿರೋಳದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ.
ನರಗುಂದ ತಾಲೂಕಿನ ಶಿರೋಳದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ.
Published on: 

ರಾಜು ಹೊಸಮನಿ ನರಗುಂದ

ಕಳೆದ 10 ವರ್ಷದಿಂದ ಕಾಯಕಲ್ಪ ಪ್ರಶಸ್ತಿ ಮುಡಿಗೇರಿಸಿಕೊಂಡು ಬಂದಿದ್ದ ತಾಲೂಕಿನ ಶಿರೋಳದ ಪ್ರಾಥಮಿಕ ಆರೋಗ್ಯ ಕೇಂದ್ರ ಇದೀಗ ರಾಷ್ಟ್ರಮಟ್ಟದ (ಎನ್‌ಕ್ಯೂಎಎಸ್) ಗುಣಮಟ್ಟ ಪ್ರಮಾಣೀಕರಣದಲ್ಲಿ 86.57 ಅತ್ಯಧಿಕ ಅಂಕ ಪಡೆಯುವ ಮೂಲಕ ವಿಶೇಷ ಪ್ರಶಸ್ತಿಗೆ ಭಾಜವಾಗಿದೆ.

ನರಗುಂದ, ರೋಣ, ಬಾದಾಮಿ, ರಾಮದುರ್ಗ ತಾಲೂಕಿನ ವಿವಿಧ ಹಳ್ಳಿಗಳೊಂದಿಗೆ ಗಡಿಗಳನ್ನು ಹೊಂದಿರುವ ಶಿರೋಳ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಒಟ್ಟು 3 ಎಕರೆ ವಿಸ್ತೀರ್ಣ ಹೊಂದಿದೆ. 12 ಹಳ್ಳಿಗಳ 32,074 ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸುತ್ತಿದೆ. ಪ್ರತಿನಿತ್ಯ 100 ಹೊರ ರೋಗಿಗಳಿಗೆ ಉಚಿತ ಚಿಕಿತ್ಸೆ, ಔಷಧೋಪಚಾರ ನೀಡುವ ಜತೆಗೆ ತಿಂಗಳಿಗೆ 10 ರಿಂದ 15 ಹೆರಿಗೆ ಮಾಡಿಸಲಾಗುತ್ತಿದೆ.

ಮಾನದಂಡಗಳೇನು?: ಆಸ್ಪತ್ರೆಯಲ್ಲಿ ದಿನದ 24 ಗಂಟೆ ತುರ್ತು ಚಿಕಿತ್ಸೆ, ಹೆರಿಗೆ, ಒಳ ಮತ್ತು ಹೊರ ರೋಗಿಗಳ ವಿಭಾಗ, ಸಾಮಾನ್ಯ ಆಡಳಿತ, ಪ್ರಯೋಗಾಲಯ ಸೇವೆ ಸದಾಕಾಲ ಲಭ್ಯವಿರಬೇಕು. ಆಸ್ಪತ್ರೆಯ ಮೂಲಸೌಕರ್ಯ, ಸಲಕರಣೆಗಳು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಾದ ತಾಯಿ ಮತ್ತು ಮಕ್ಕಳ ಆರೈಕೆ, ಕ್ಷಯ, ಕುಷ್ಠರೋಗ ಪತ್ತೆ ಹಾಗೂ ನಿವಾರಣೆ, ರೋಗ ನಿರ್ವಾಹಕಗಳು, ಚುಚ್ಚುಮದ್ದು ಪರಿಶೀಲನೆ, ಆಸ್ಪತ್ರೆ ಅಧಿಕಾರಿ, ಸಿಬ್ಬಂದಿ, ರೋಗಿಗಳ ಸಂದರ್ಶನ, ಸಮಾಲೋಚನೆ ಸೇರಿದಂತೆ ಆಸ್ಪತ್ರೆಯ ಪ್ರತಿಯೊಂದು ವಿಭಾಗದಲ್ಲಿ ದಿನದ 24 ಗಂಟೆ ನಡೆಯುವ ಪ್ರಕ್ರಿಯೆಯನ್ನು ದಾಖಲೀಕರಣ ಮಾಡಬೇಕಾಗುತ್ತದೆ. ಆಸ್ಪತ್ರೆಯಲ್ಲಿರುವ ಉಪಕರಣಗಳ ಗುಣಮಟ್ಟ, ಬಳಕೆ, ಸ್ವಚ್ಛತೆ, ಔಷಧ ವಿತರಣೆ, ರೋಗಿಗಳಿಗೆ ಉಪಚಾರ ಹಾಗೂ ರೋಗಿಗಳಿಗೆ ವಿತರಿಸಿದ ಔಷಧ ದಾಖಲಾತಿ, ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸಾಗಿಸುವ ದಾಖಲು, ಕಸ ಗುಡಿಸಿದ ಕಾಲ ಸೇರಿದಂತೆ ಹಲವಾರು ದಾಖಲಾತಿಗಳನ್ನು ಪರಿಶೀಲಿಸಲಾಗುತ್ತದೆ.

ಆಸ್ಪತ್ರೆ ವ್ಯಾಪ್ತಿಗೊಳಪಡುವ ಹಳ್ಳಿಗಳಿಗೆ ದಾದಿಯರ ಭೇಟಿ, ರೋಗಿಗಳೊಡನೆ ಅವರ ಸ್ಪಂದನೆ, ವಿದ್ಯುತ್ ಅಭಾವದ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ, ವಿದ್ಯುತ್ ಸರಬರಾಜು ಪ್ರಕ್ರಿಯೆ, ಕಟ್ಟಡದ ಗುಣಮಟ್ಟ, ಶುದ್ಧೀಕರಣ, ತ್ಯಾಜ್ಯಗಳ ವಿಂಗಡಣೆ, ಸಂಗ್ರಹ, ಸರ್ಕಾರದಿಂದ ಬಂದಿರುವ ಅನುದಾನ ಉಪಯೋಗ ಮಾಡಿಕೊಂಡಿರುವ ದಾಖಲೆ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಎನ್‌ಕ್ಯೂಎಎಸ್ ಎಂದರೇನು?

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲವು ಸರ್ಕಾರಿ ಆಸ್ಪತ್ರೆಗಳ ಉತ್ತಮ ಸೇವೆ, ಸ್ವಚ್ಛತೆ, ಗುಣಮಟ್ಟದ ಚಿಕಿತ್ಸೆಯನ್ನು ಪರಿಗಣಿಸಿ ನೀಡುವ ರಾಷ್ಟ್ರೀಯ ಗುಣಮಟ್ಟದ ಮಾನದಂಡ ಪ್ರಮಾಣ ಪತ್ರ. ಗ್ರಾಮೀಣ ಮತ್ತು ನಗರ ಪ್ರದೇಶದ ಆರೋಗ್ಯ ಕೇಂದ್ರಗಳು ಖಾಸಗಿ ಆಸ್ಪತ್ರೆಗಳಿಗೆ ಸರಿಸಮಾನವಾಗಿ ಸೇವೆ ನೀಡುತ್ತಿವೆ ಎಂಬುವುದಕ್ಕೆ ಇದು ಅಧಿಕೃತ ಮನ್ನಣೆ ಆಗಿರುತ್ತದೆ. ಈ ಪ್ರಮಾಣ ಪತ್ರವನ್ನು ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳ ಸಂಪನ್ಮೂಲ ಕೇಂದ್ರ (ಎನ್‌ಎಚ್‌ಎಸ್‌ಆರ್‌ಸಿ) ರೂಪಿಸಿರುವ ಕಠಿಣ ಮೌಲ್ಯಮಾಪನದ ಆಧಾರದ ಮೇಲೆ ನೀಡಲಾಗುತ್ತದೆ.

ಆಸ್ಪತ್ರೆಯಲ್ಲಿರುವ ಎಲ್ಲ ವಿಭಾಗದ ಕಾರ್ಯವೈಖರಿ, ದಾಖಲೆ ಪುಸ್ತಕ ಪ್ರತಿಯೊಂದನ್ನು ಕ್ರಾಸ್ ಚೆಕ್ ಮಾಡಲಾಗುತ್ತದೆ. ಸಿಬ್ಬಂದಿಗಳ ಕೊರತೆಯಿದ್ದರೂ ಅಗತ್ಯ ಮೂಲ ಸೌಲಭ್ಯ ಹೊಂದಿರುವ ಶಿರೋಳ ಸರ್ಕಾರಿ ಆಸ್ಪತ್ರೆಯ ಎಲ್ಲ ಅಧಿಕಾರಿ, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ರೋಗಿಗಳ ಸಹಕಾರದಿಂದ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ.

ಡಾ.ಪಂಕಜಾ ಮೈತ್ರಿ, ಶಿರೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ