ಅಕ್ರಮ ಮದ್ಯಕ್ಕಿಲ್ಲ ಕಡಿವಾಣ

ಸರಿಯಾಗಿ ಕಚೇರಿಗೆ ಬಾರದ ಅಧಿಕಾರಿಗಳು, ದಂಧೆಕೋರರ ಆದಾಯ ಜೋರು
The Excise Inspector's office located in the town of Nargund.
ನರಗುಂದ ಪಟ್ಟಣದಲ್ಲಿರುವ ಅಬಕಾರಿ ನೀರಿಕ್ಷಕರ ಕಚೇರಿ.
Published on: 

ರಾಜು ಹೊಸಮನಿ ನರಗುಂದ

ಸರ್ಕಾರಕ್ಕೆ ಆದಾಯ ತಂದುಕೊಡಬೇಕಿದ್ದ ಪಟ್ಟಣದ ಅಬಕಾರಿ ನೀರಿಕ್ಷಕರ ಕಚೇರಿಗೆ ಸಿಬ್ಬಂದಿ ಕೊರತೆ ಎದುರಾಗಿದೆ. ಕರ್ತವ್ಯನಿರತ ಅಧಿಕಾರಿಗಳು ಕಚೇರಿಯಲ್ಲಿರದೇ ಮನಸೋ ಇಚ್ಛೆ ವರ್ತಿಸುತ್ತಿರುವ ಕಾರಣ ಅಕ್ರಮ ಮದ್ಯ ಮಾರಾಟದ ಹಾವಳಿ ಜೋರಾಗಿದೆ. ಅಧಿಕಾರಿಗಳ ಅನಧಿಕೃತ ಗೈರಿನಿಂದ ಕೆಲವು ದಂಧೆಕೋರರಿಗೆ ಆದಾಯ ದ್ವಿಗುಣಗೊಳಿಸುವ ಸುಗ್ಗಿಯ ಕಾಲ ಬಂದೋದಗಿದೆ.

ಪಟ್ಟಣ ಒಳಗೊಂಡಂತೆ ತಾಲೂಕಿನಾದ್ಯಂತ 8 ಸಿಎಲ್-2, 5 ಸಿಎಲ್-9, 3 ಸಿಎಲ್-7, 3 ಎಂಎಸ್‌ಐಎಲ್, 1 ಎಲ್‌ಎಫ್‌ಡಬ್ಲುೃ ವೈನ್ ಮಳಿಗೆ ಸೇರಿದಂತೆ ಒಟ್ಟು 20 ವಿವಿಧ ಮಧ್ಯದ ಅಂಗಡಿಗಳಿಂದ ಪ್ರತಿನಿತ್ಯ ಲಕ್ಷಾಂತರ ರೂ. ಮೊತ್ತದ ಮದ್ಯದ ವ್ಯವಹಾರ ನಡೆಯುತ್ತಿದೆ. ಸಿಎಲ್-9 ಅಂಗಡಿಗಳಲ್ಲಿ ಊಟ ಮಾಡುವ ಗ್ರಾಹಕರಿಗೆ ಟೇಬಲ್‌ವರೆಗೆ ಮದ್ಯದ ಸರ್ವಿಸ್ ನೀಡಬಹುದು. ಸಿಎಲ್-7 ಅಂಗಡಿಗಳಲ್ಲಿ ಸಿಟಿಂಗ್ ಟೇಬಲ್ ಸರ್ವಿಸ್ ನೀಡುವುದರ ಜತೆಗೆ ಲಾಜ್‌ಗಳಲ್ಲಿ ವಾಸ್ತವ್ಯ ಹೊಂದಿದ ಪ್ರವಾಸಿಗರಿಗೂ ಮದ್ಯ ಪೂರೈಕೆಗೆ ಅಬಕಾರಿ ಇಲಾಖೆ ಕಾನೂನಿನಡಿ ಅವಕಾಶ ಕಲ್ಪಿಸಿದೆ.

ಸಿಎಲ್-2, ಎಂಎಸ್‌ಐಎಲ್ ಮಳಿಗೆಗಳಿಗೆ ಆಗಮಿಸುವ ಗ್ರಾಹಕರಿಗೆ ಪಾರ್ಸ್‌ಲ್ ನೀಡಲು ಮಾತ್ರ ಅವಕಾಶವಿದೆ. ಆದರೆ, ಅಧಿಕಾರಿಗಳ ಕರ್ತವ್ಯ ಲೋಪದಿಂದ ತಾಲೂಕಿನ ಎಲ್ಲ ಸಿಎಲ್-2 ಅಂಗಡಿ ಮುಂಗಟ್ಟುಗಳಲ್ಲಿ ಮದ್ಯಪ್ರಿಯರಿಗೆ ಟೇಬಲ್ ಸರ್ವಿಸ್ ನೀಡುವುದರ ಮೂಲಕ ಕಂಠಪೂರ್ತಿ ಮದ್ಯ ಕುಡಿಸಿ ಕೈತುಂಬ ಕಾಸು ಮಾಡಿಕೊಳ್ಳುತ್ತಿರುವ ಪ್ರಕರಣ ನಿರಂತರ ಕಂಡು ಬರುತ್ತಿದೆ.

ಲಕ್ಷ್ಮೀ ಕೃಪಾ ಕಟಾಕ್ಷ, ಸರ್ಕಾರದ ಮದ್ಯ ಮಾರಾಟದ ಗುರಿ ತಲುಪಲು ಹೆಣಗಾಡುವ ಅಧಿಕಾರಿಗಳು ಕೆಲವೊಂದು ಬಾರ್ ಆ್ಯಂಡ್ ರೆಸ್ಟೋರೆಂಟ್, ಹೋಟೆಲ್, ಡಾಬಾ, ಬಿಡಿ ಅಂಗಡಿಗಳಲ್ಲಿ ನಿಯಮಬಾಹಿರ ಅಕ್ರಮ ಮದ್ಯ ಮಾರಾಟ ನಡೆದರೂ ಮೌನಕ್ಕೆ ಶರಣಾಗುವಂತೆ ಮಾಡಿದೆ.

ಕಳ್ಳಬಟ್ಟಿ ದಂಧೆ ಅವ್ಯಾಹತ

ತಾಲೂಕಿನ ಶಿರೋಳ, ರಡ್ಡೇರನಾಗನೂರ ಭಾಗದಲ್ಲಿ ಅಗ್ಗದ ಬೆಲೆಯ ಕಳ್ಳಬಟ್ಟಿ ಮಧ್ಯ ತಯಾರಿಸುವ ದಂಧೆ ನಿರಂತರ ಮುಂದುವರಿದಿದೆ. ಸ್ಥಳೀಯರು ತಯಾರಿಸಿದ ಕಳ್ಳಬಟ್ಟಿಗೆ ಭಾರೀ ಬೇಡಿಕೆ ಇರುವುದರಿಂದ ಇದನ್ನು ಸದ್ದಿಲ್ಲದೆ ಕದ್ದುಮುಚ್ಚಿ ಮಾರಾಟ ಮಾಡಲಾಗುತ್ತದೆ. ಆಗೊಮ್ಮೆ-ಈಗೊಮ್ಮೆ ದಾಳಿ ನಡೆಸುವ ಅಬಕಾರಿ ಅಧಿಕಾರಿಗಳು ಜಾಲಿ ಮುಳ್ಳಿನ ಪೊದೆ, ಜಮೀನು, ನಿರ್ಜನ ಪ್ರದೇಶಗಳಲ್ಲಿ ಅಡಗಿಸಿಟ್ಟಿರುವ ಕಳ್ಳಬಟ್ಟಿ ತಯಾರಿಕೆಗೆ ಬಳಸುವ ವಿವಿಧ ವಸ್ತು-ಪರಿಕರ ನಾಶಪಡಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳ ಪರಾರಿ ಎಂದು ನಮೂದಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಲಕ್ಷಾಂತರ ರೂ. ದಂಡ ವಸೂಲಿ

ಕಳೆದ ಜುಲೈ-2025 ರಿಂದ ಇಲ್ಲಿಯವರೆಗೆ ಅಕ್ರಮ ಮದ್ಯ ಮಾರಾಟ ಮಾಡಿರುವ ವಿವಿಧ ಹೋಟೆಲ್, ಡಾಬಾ, ಅಂಗಡಿಗಳ ಮೇಲೆ ದಾಳಿ ನಡೆಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಒಟ್ಟು 79 ಪ್ರಕರಣ ದಾಖಲಿಸಿ 1 ಲಕ್ಷ 18,500 ರೂ. ದಂಡ ವಿಧಿಸಿದ್ದಾರೆ. ನಿಯಮಬಾಹಿರ ಮದ್ಯ ಮಾರಾಟ ಮಾಡಿದ ತಾಲೂಕಿನ 20 ಮದ್ಯದ ಅಂಗಡಿಗಳ ಮೇಲೆ 27 ಬಿಎಲ್‌ಸಿ ಕೇಸ್ ದಾಖಲಿಸಿಕೊಂಡು 7 ಲಕ್ಷದ 50 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ. ತಾಲೂಕಿನ ಹದ್ಲಿ ಗ್ರಾಮದಲ್ಲಿ 46 ಗ್ರಾಂ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ, ಹಿರೇಕೊಪ್ಪ ಗ್ರಾಮದಲ್ಲಿ 4.86 ಲೀಟರ್ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಬೈಕ್ ವಶಪಡಿಸಿಕೊಂಡಿರುವ ಅಧಿಕಾರಿಗಳು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಧಾವೆ ಹೂಡಿ ಕಳೆದೊಂದು ವರ್ಷದಿಂದ ಎರಡೂ ಕೇಸ್‌ಗಳ ವಿಚಾರಣೆಗೆ ಹಾಜರಾಗುತ್ತಿದ್ದಾರೆ.

ಕಚೇರಿ ಕೆಲಸಕ್ಕೆ ಅನಧಿಕೃ ಗೈರು ಹಾಜರಾಗಿರುವ ನರಗುಂದದ ಇಬ್ಬರು ಉಪ ನೀರಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವುದರ ಜತೆಗೆ ಅಕ್ರಮ ಮದ್ಯ ಮಾರಾಟ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.

ಮಂಜುನಾಥ ಮಾಲಿ ಪಾಟೀಲ, ಅಬಕಾರಿ ಡಿಸಿ

ಪಟ್ಟಣದ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಶುಕ್ರವಾರ ಯಾರೊಬ್ಬರೂ ಇರಲಿಲ್ಲ. ನಗರ, ಗ್ರಾಮೀಣ ಪ್ರದೇಶದ ಜನರ ಸ್ವಾಸ್ಥ್ಯ, ಬಡ ಕುಟುಂಬಗಳ ನೆಮ್ಮದಿ ಕಾಪಾಡಬೇಕಾದ ಅಬಕಾರಿ ಇಲಾಖೆ ಅಧಿಕಾರಿಗಳು ಕರ್ತವ್ಯ ಲೋಪ ಎಸಗುತ್ತಿದ್ದಾರೆ. ಕಚೇರಿಗೆ ಅನಧಿಕೃತ ಗೈರು ಹಾಜರಾಗುವ ಮೂಲಕ ಅಕ್ರಮ ಮದ್ಯ ಮಾರಾಟಗಾರರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ.

ಬೂದಪ್ಪ ಹಳೇಮನಿ, ಸಾಮಾಜಿಕ ಕಾರ್ಯಕರ್ತ