Immoral relationship ಅನೈತಿಕ ಸಂಬಂಧ ಶಂಕೆ ಯುವಕನ ಹತ್ಯೆ

 ಈರಣ್ಣ ಅಗಸಿಬಾಗಿಲ
ಈರಣ್ಣ ಅಗಸಿಬಾಗಿಲ
Published on

ಲಕ್ಷ್ಮೇಶ್ವರ: ಯುವಕನೊಬ್ಬನನ್ನು ಭೀಕರವಾಗಿ ಕೊಲೆಗೈದ ಘಟನೆ ತಾಲೂಕಿನ ಪು.ಬಡ್ನಿ ಗ್ರಾಮದಲ್ಲಿ ಬುಧವಾರ ರಾತ್ರಿ ಜರುಗಿದೆ. ಈರಣ್ಣ ಷಣ್ಮುಖಪ್ಪ ಅಗಸಿಬಾಗಿಲ (34) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಯುವಕನ ಮನೆಯಂಗಳದಲ್ಲಿಯೇ ಬಡಿಗೆ ಹಾಗೂ ಕಟ್ಟಿಗೆ ಮಣಿಯಿಂದ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಮೃತ ಯುವಕ ಕುರಿ ಕಾಯುತ್ತಿದ್ದು, ಗ್ರಾಮದ ಯುವತಿಯೋರ್ವಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಶಂಕೆಯೇ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಇದೇ ವಿಷಯವಾಗಿ ಎರಡು ವರ್ಷಗಳ ಹಿಂದೆ ಗ್ರಾಮದ ಹಿರಿಯರು ರಾಜಿ ಮಾಡಿಸಿದ್ದರೂ ಎನ್ನಲಾಗುತ್ತಿದ್ದು, ಆದರೂ ದ್ವೇಷ ಹಾಗೇಯೆ ಇಟ್ಟುಕೊಂಡು ಈರಣ್ಣನ ಕೊಲೆಗೈಯುವ ಮೂಲಕ ಅಂತ್ಯಗೊಂಡಂತಾಗಿದೆ.

ಬುಧವಾರ ರಾತ್ರಿ 9ಂದ 10ಗಂಟೆ ಸುಮಾರಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಗಂಡ ಹಾಗೂ ಆತನ ಸಂಬಂಧಿಕರು ಮೃತ ಯುವಕ ಈರಣ್ಣನ ಮನೆಗೆ ತೆರಳಿ ಜಗಳ ಆರಂಭಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಮನೆಯಲ್ಲಿಯೇ ಇದ್ದ ಕಟ್ಟಿಗೆ ಮಣಿಯಿಂದ ಕಬ್ಬಿಣದ ರಾಡು ಮತ್ತು ಬಡಿಗೆಯಿಂದ ಹಲ್ಲೆ ನಡೆಸಿದ್ದು, ತೀವ್ರ ರಕ್ತ ಸಿಕ್ತವಾದ ಯುವಕ ಈರಣ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಕೊಲೆಗೈದ ವ್ಯಕ್ತಿಗಳು ಲಕ್ಷ್ಮೇಶ್ವರ ಠಾಣೆಗೆ ರಾತ್ರಿಯೆ ಹೋಗಿ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿಯುತ್ತಲೆ ಲಕ್ಷ್ಮೇಶ್ವರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದೇ ಕುಟುಂಬದ ನಾಲ್ವರು ಈ ಕೊಲೆ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಕೊಲೆ ನಡೆದ ಸ್ಥಳಕ್ಕೆ ಎಸ್ಪಿ ಹಾಗೂ ಡಿವೈಎಸ್ಪಿ, ಸಿಪಿಐ, ಪಿಎಸ್‌ಐ, ಕ್ರೈಂ ವಿಭಾಗದ ಪಿಎಸ್‌ಐ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net