GREEN GRAM: ಹೆಸರು ಬೆಳೆಗೆ ಹಳದಿ ನಂಜಾಣು ರೋಗ

ಲಕ್ಷ್ಮೇಶ್ವರದ ಲಿಂಗಶೆಟ್ಟಿ ಅವರ ಜಮೀನಿನಲ್ಲಿ ಬೆಳೆದ ಹೆಸರು ಬೆಳೆಗೆ ಸಂಪೂರ್ಣ ಹಳದಿ ರೋಗಬಾಧೆ ಆವರಿಸಿರುವುದು.
ಲಕ್ಷ್ಮೇಶ್ವರದ ಲಿಂಗಶೆಟ್ಟಿ ಅವರ ಜಮೀನಿನಲ್ಲಿ ಬೆಳೆದ ಹೆಸರು ಬೆಳೆಗೆ ಸಂಪೂರ್ಣ ಹಳದಿ ರೋಗಬಾಧೆ ಆವರಿಸಿರುವುದು.
Published on
ಮಲ್ಲು ಕಳಸಾಪುರ ಲಕ್ಷ್ಮೇಶ್ವರ
ಮುಂಗಾರು ಆರಂಭದಲ್ಲಿ ಮಳೆ ಕೈ ಹಿಡಿದ ಕಾರಣ ಭರವಸೆಯಿಂದ ಬಿತ್ತನೆ ಮಾಡಿದ್ದ ಹೆಸರು (GREEN GRAM) ಬೆಳೆಗೆ ಇದೀಗ ಹಳದಿ ನಂಜಾಣು ರೋಗ, ಮುಟುರು ಹಾಗೂ ಹಸಿರು ಕೀಟದ ಬಾಧೆ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ಈಗಾಗಲೇ ಬರದ ಸಂಕಷ್ಟದಲ್ಲಿರುವ ರೈತ ಸಮುದಾಯ ಮತ್ತಷ್ಟು ಆತಂಕಕ್ಕೆ ಒಳಗಾಗಿದೆ.
ಮೇ ಅಂತ್ಯ ಹಾಗೂ ಜೂನ್ ಮೊದಲ ವಾರದಲ್ಲಿ ಸುರಿದ ಉತ್ತಮ ಮಳೆಯ ಆಶ್ರಯದಲ್ಲಿ ತಾಲೂಕಿನ ರೈತರು ಹೆಸರು ಬಿತ್ತನೆ ಮಾಡಿದ್ದರು. ಆದರೆ, ನಂತರ ಮಳೆ ಕೊರತೆಯಿಂದ ಫಸಲಿನ ಬೆಳವಣಿಗೆ ಕುಂಠಿತಗೊಂಡಿದ್ದರೆ, ಈಗ ಹಳದಿ ರೋಗದ ಜತೆಗೆ ಮುಟುರು ಮತ್ತು ಹಸಿರು ಕೀಟಗಳ ದಾಳಿ ಬೆಳೆಗೆ ತೀವ್ರ ಹಾನಿ ಉಂಟುಮಾಡುತ್ತಿದೆ. ಬೆಳೆ ಉಳಿಸಿಕೊಳ್ಳಲು ರೈತರು ಕ್ರಿಮಿನಾಶಕ ಸಿಂಪಡಣೆ ಮಾಡಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಆದರೂ ಹಳದಿ ರೋಗ ಮತ್ತೆ ಕಾಣಿಸಿಕೊಂಡಿರುವುದು ರೈತರನ್ನು ನಿರಾಸೆಗೊಳಿಸಿದೆ.
ಲಕ್ಷ್ಮೇಶ್ವರ ಸೇರಿದಂತೆ ರಾಮಗೇರಿ, ಯಳವತ್ತಿ, ಯತ್ನಳ್ಳಿ, ಶಿಗ್ಲಿ, ದೊಡ್ಡೂರ, ಸೂರಣಗಿ, ಬಾಲೆಹೊಸೂರ, ಅಕ್ಕಿಗುಂದ, ಬಡ್ನಿ, ಬಟ್ಟೂರ, ಹರದಗಟ್ಟಿ, ಅಡರಕಟ್ಟಿ ಹಾಗೂ ಗೊಜನೂರ ಗ್ರಾಮಗಳಲ್ಲಿ 5100 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆದಿದ್ದು, ಬಹುತೇಕ ಎಲ್ಲೆಡೆ ರೋಗದ ಲಕ್ಷಣಗಳು ಕಂಡುಬಂದಿವೆ.

ಹೆಸರಿನ ಮೇಲಿನ ರೈತರ ಒಲವು ಕಡಿಮೆಯಾಗಿಲ್ಲ

ಕಳೆದ ಹಲವು ವರ್ಷಗಳಿಂದ ಹಳದಿ ರೋಗದಿಂದ ನಷ್ಟ ಅನುಭವಿಸುತ್ತಿದ್ದರೂ ರೈತರು ಹೆಸರು ಬೆಳೆಯುವುದನ್ನು ಕೈಬಿಟ್ಟಿಲ್ಲ. ಅಲ್ಪಾವಧಿಯ ಬೆಳೆ, ಕಡಿಮೆ ವೆಚ್ಚ, ಯಂತ್ರದ ಮೂಲಕ ಸುಲಭ ಕೊಯ್ಲು, ಬೆಂಬಲ ಬೆಲೆಯ ಲಾಭ ಹಾಗೂ ನಂತರ ಹಿಂಗಾರು ಕಡಲೆ ಬೆಳೆಗೆ ಅನುಕೂಲವಾಗುವ ಕಾರಣ ಅಲ್ಲದೆ, ಕೇಂದ್ರ ಸರ್ಕಾರ 8780 ರೂ. ಬೆಂಬಲ ನಿಗದಿ ಮಾಡಿದ್ದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೆಳೆಯುತ್ತಿದ್ದಾರೆ. ಈ ವರ್ಷ ರೈತರು ಅನ್ಯ ಜಿಲ್ಲೆಯಿಂದ ಕ್ವಿಂಟಾಲ್‌ಗೆ 15 ಸಾವಿರ ರೂ.ದಂತೆ ಬೀಜ ಖರೀದಿಸಿ ತಂದಿದ್ದಾರೆ ಲಕ್ಷ್ಮೇಶ್ವರ ರೈತ ಸಂಪರ್ಕ ಕೇಂದ್ರದಲ್ಲಿ 80 ಕ್ವಿಂಟಾಲ್ ಹಾಗೂ ಖಾಸಗಿ ಮಾರಾಟ ಕೇಂದ್ರಗಳಲ್ಲಿ ನೂರಾರು ಕ್ವಿಂಟಾಲ್ ಹೊಸ ತಳಿಯ ಬೀಜ ಮಾರಾಟವಾಗಿದೆ. ಕ್ರಿಮಿನಾಶಕ ಸಿಂಪಡಣೆಯಿಂದಲೂ ನಿಯಂತ್ರಣ ಸಾಧ್ಯವಾಗಿಲ್ಲ
ಕೃಷಿ ಇಲಾಖೆ ಸೂಚನೆಯಂತೆ ಹಳದಿ ರೋಗ ಬಾಧಿತ ಗಿಡಗಳನ್ನು ಕಿತ್ತು ಮಣ್ಣಿನಲ್ಲಿ ಹೂಳುವುದು, ಕೀಟ ನಿಯಂತ್ರಣಕ್ಕೆ ಕ್ರಿಮಿನಾಶಕ ಸಿಂಪಡಣೆ ಸೇರಿದಂತೆ ವಿವಿಧ ಕ್ರಮಗಳನ್ನು ರೈತರು ಅನುಸರಿಸುತ್ತಿದ್ದಾರೆ. ಆದರೂ ರೋಗ ಹರಡುವಿಕೆ ನಿಲ್ಲದಿರುವುದು ಬೆಳೆಗಾರರ ಚಿಂತೆಗೆ ಕಾರಣವಾಗಿದೆ.

ರೈತರ ಆಗ್ರಹ

ಈ ವರ್ಷ ಎಲ್‌ನಿನೋ ಪರಿಣಾಮ ಮುಂಗಾರು ಮಳೆ ಕೊರತೆಯಾಗಲಿದೆ ಎಂಬ ಕಾರಣದಿಂದ ಕಡಿಮೆ ಮಳೆಗೂ ಹೆಸರು ಬರುತ್ತದೆ ಎಂಬ ಕಾರಣದಿಂದ ತೇವಾಂಶ ಆಧರಿಸಿ ಒಂದಷ್ಟು ಬೇಗನೆ ಬಿತ್ತನೆ ಮಾಡಲಾಗಿದೆ. ಈಗ ತೇವಾಂಶ ಕೊರತೆಯಿಂದ ಹೆಚ್ಚು ಕ್ರಿಮಿನಾಶಕ ಸಿಂಪಡಣೆ ಮಾಡಲೂ ಸಾಧ್ಯವಾಗುತ್ತಿಲ್ಲ. ಹಳದಿ ರೋಗ ನಿಯಂತ್ರಣಕ್ಕೆ ಪರಿಣಾಮಕಾರಿ ಔಷಧ ಲಭ್ಯವಾಗಬೇಕು. ಬೆಳೆ ವಿಮೆ ಮಾಡಿಸಿರುವ ರೈತರಿಗೆ ತ್ವರಿತವಾಗಿ ವಿಮೆ ಹಾಗೂ ಬೆಳೆಹಾನಿ ಪರಿಹಾರ ನೀಡಬೇಕು. ಕೃಷಿ ಇಲಾಖೆ ವೈಜ್ಞಾನಿಕ ಸಲಹೆ ಹಾಗೂ ನಿರಂತರ ಕ್ಷೇತ್ರ ಭೇಟಿ ನಡೆಸಿ ರೈತರ ನೆರವಿಗೆ ಬರಬೇಕು ಎಂದು ಬೆಳೆಗಾರರಾದ ಗಂಗಪ್ಪ ಲಿಂಗಶೆಟ್ಟಿ, ಈರಣ್ಣ ಆದಿ, ಮಲ್ಲೇಶ ಉಮಚಗಿ ಮತ್ತಿತರರು ಆಗ್ರಹಿಸಿದ್ದಾರೆ.

ಅವಧಿ ಪೂರ್ವ ಬಿತ್ತನೆಯಾದ ಬೆಳೆಗಳಲ್ಲಿ ಹಳದಿ ರೋಗಬಾಧೆ ಹೆಚ್ಚು ಕಂಡು ಬರುತ್ತದೆ. ಬೆಳೆ ಬದಲಾವಣೆ ಪದ್ಧತಿ, ಮಣ್ಣು ಪರೀಕ್ಷೆ ಹಾಗೂ ಬಿತ್ತನೆ ಪೂರ್ವ ಬೀಜೋಪಚಾರ ಕಡ್ಡಾಯವಾಗಿ ಕೈಗೊಳ್ಳಬೇಕು. ಹಳದಿ ರೋಗದ ಲಕ್ಷಣ ಕಂಡ ತಕ್ಷಣ ಸೋಂಕಿತ ಗಿಡಗಳನ್ನು ಕಿತ್ತು ಮಣ್ಣಿನಲ್ಲಿ ಹೂಳಬೇಕು. ರಸಹೀರುವ ಹಾಗೂ ಹಸಿರು ಕೀಟಗಳ ನಿಯಂತ್ರಣಕ್ಕೆ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಕ್ರಿಮಿನಾಶಕ ಲಭ್ಯವಿದ್ದು, ರೈತರು ಬೆಳೆ ದೃಢೀಕರಣ, ಬೆಳೆವಿಮೆ ಮಾಡಿಸಿಕೊಳ್ಳಬೇಕು.

— ಚಂದ್ರಶೇಖರ ನರಸಮ್ಮನವರ, ಕೃಷಿ ಅಧಿಕಾರಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net