ಬಾಕಿ ಕಾಮಗಾರಿ ಕೈಗೊಳ್ಳದಿದ್ದರೆ ನೋಟಾ ಚಲಾವಣೆ

ಕಳಸಾ-ಬಂಡೂರಿ ಕೇಂದ್ರ ಯುವ ಹೋರಾಟ ಸಮಿತಿ ಅಧ್ಯಕ್ಷ ಡಾ. ವಿಜಯ ಕುಲಕರ್ಣಿ ಎಚ್ಚರಿಕೆ
ಡಾ. ವಿಜಯ ಕುಲಕರ್ಣಿ
ಡಾ. ವಿಜಯ ಕುಲಕರ್ಣಿ
Published on: 

ಬರಗಾಲದಿಂದ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. 2500 ರೂ. ಕನಿಷ್ಠ ಪರಿಹಾರದ ಬದಲಿಗೆ ಎಕರೆವಾರು ಗರಿಷ್ಠ ಮೊತ್ತದ ಪರಿಹಾರ ವಿತರಣೆಗೆ ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳಬೇಕು. ಪ್ರತಿಯೊಂದು ಚುನಾವಣೆಗಳಲ್ಲಿ ನೋಟಾ ಬಗ್ಗೆ ಮತದಾರರಿಗೆ ಜಾಗೃತಿ ಮೂಡಿಸಬೇಕಾದ ಚುನಾವಣೆ ಆಯೋಗ ಕೋಮಾ ಸ್ಥಿತಿಯಿಂದ ಎದ್ದೇಳದಿದ್ದರೆ ಆಯೋಗದ ವಿರುದ್ಧ ಧರಣಿ ನಡೆಸಲಾಗುವುದು.

ವಿಜಯ ಕುಲಕರ್ಣಿ

ನರಗುಂದ: ಉತ್ತರ ಕರ್ನಾಟಕದ ಕಳಸಾ-ಬಂಡೂರಿ ಯೋಜನೆ ಬಾಕಿ ಕಾಮಗಾರಿಯನ್ನು ತಕ್ಷಣವೇ ಕೈಗೆತ್ತಿಕೊಳ್ಳದಿದ್ದರೆ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಜನಪ್ರತಿನಿಧಿಗಳ ನಡೆ ವಿರೋಧಿಸಿ ನೋಟಾ ಮತದಾನದ ಬಗ್ಗೆ ವ್ಯಾಪಕ ಜಾಗೃತಿ ಅಭಿಯಾನ ಕೈಗೊಳ್ಳಲಾಗುವುದು ಎಂದು ಕಳಸಾ-ಬಂಡೂರಿ ಕೇಂದ್ರ ಯುವ ಹೋರಾಟ ಸಮಿತಿ ಅಧ್ಯಕ್ಷ ಡಾ. ವಿಜಯ ಕುಲಕರ್ಣಿ ಎಚ್ಚರಿಸಿದರು.

ಕಳಸಾ-ಬಂಡೂರಿ ಹೋರಾಟ ಪ್ರಾರಂಭಿಸಿ 26ನೇ ವಷರ್ಕ್ಕೆ ಪದಾರ್ಪಣೆಗೊಂಡ ಹಿನ್ನೆಲೆ ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 2001ರಲ್ಲಿ ದೀಪಾವಳಿ ಮರಿ ಪಾಡ್ಯ ದಿನದಂದು ನರಗುಂದ ಪಂಚಗ್ರಹ ಗುಡ್ಡದ ಹಿರೇಮಠದಲ್ಲಿ ಕಳಸಾ-ಬಂಡೂರಿ ಹೋರಾಟಕ್ಕೆ ಚಾಲನೆ ನೀಡಲಾಯಿತು. ಎಸ್.ಎಂ. ಬಾಳಿಕಾಯಿ, ಶರಣಪ್ಪ ನಂದಿ ಇತರರ ನೇತೃತ್ವದಲ್ಲಿ ಪ್ರತಿ ಬುಧವಾರ ಹೋರಾಟದ ರೂಪುರೇಷೆ ಕುರಿತು ಸಭೆ ನಡೆಸಲಾಗುತ್ತಿತ್ತು. ನಗರ ಸೇರಿ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಉಪವಾಸ ಸತ್ಯಾಗ್ರಹ ಸೇರಿದಂತೆ ವಿವಿಧ ಹೋರಾಟದ ಪರಿಣಾಮ 2006ರಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು 49.5 ಕೋಟಿ ರೂ. ವೆಚ್ಚದ ಕಳಸಾ-ಬಂಡೂರಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಅರಣ್ಯೇತರ ಪ್ರದೇಶದಲ್ಲಿ ಈಗಾಗಲೇ 5 ಕಿ.ಮೀ. ಕಳಸಾ ನಾಲೆ ಕಾಮಗಾರಿ ಪೂರ್ಣಗೊಂಡಿದೆ. ಇನ್ನುಳಿದ ಕಾಮಗಾರಿ ವಿವಿಧ ಕಾರಣಗಳಿಂದ ಬಾಕಿ ಉಳಿದಿದೆ ಎಂದರು.

ಬಂಡೂರಿ ನಾಲೆಯ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಅನುಮತಿ ನೀಡಬೇಕು. ಈ ಮಹತ್ವದ ಕಾಮಗಾರಿ ಕೈಗೊಳ್ಳುವುದರಿಂದ ಕಳಸಾ-ಬಂಡೂರಿಯಿಂದ 7.33 ಟಿಎಂಸಿ ನೀರು ಹರಿದು ಬರಲಿದೆ. ಇನ್ನುಳಿದ ಕಿರು ಹಳ್ಳಗಳಾದ ಚೋರ್ಲಾ ನಾಲೆಯಿಂದ 2 ಟಿಎಂಸಿ, ಪೋಟ್ಲಾದಿಂದ 1.75 ಟಿಎಂಸಿ, ಗುರ್ಕಿ 1.5, ಹಳತಾರ 0.55 ಟಿಎಂಸಿ ನೀರು ನವಿಲುತೀರ್ಥ ಜಲಾಶಯಕ್ಕೆ ಹರಿದು ಬರುವುದರಿಂದ ಈ ಭಾಗದ ರೈತರ ಕೃಷಿ ಚಟುವಟಿಕೆ, ಕಾರ್ಖಾನೆಗಳ ಉಗಮಕ್ಕೆ ಪೂರಕ ಶಕ್ತಿ ನೀಡಿದಂತಾಗಲಿದೆ. ಆದರೆ, ವಿನಾಕಾರಣ ರಾಜಕೀಯ ಕಚ್ಚಾಟ ಮಾಡುತ್ತಿರುವುದರಿಂದ 25 ವರ್ಷ ಗತಿಸಿದರೂ ಯೋಜನೆ ಅನುಷ್ಠಾನಗೊಳಿಸದಿರುವುದು ನಾಚಿಕೆಗೇಡಿನ ಸಂಗತಿ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕ ಭಾಗದ ರೈತರು ನೆಮ್ಮದಿಯಿಂದ ನೆಲೆಸುವಂತಾಗಬೇಕಾದರೆ ರಾಜ್ಯ ಸರ್ಕಾರ ತಕ್ಷಣವೇ ಈ ಭಾಗದ ಎಲ್ಲ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಇಲ್ಲದಿದ್ದರೆ ಈ ಭಾಗದ ಯುವಕರ ಕನಸು ನುಚ್ಚುನೂರಾಗುತ್ತದೆ. ಇದರಿಂದ ಸರ್ಕಾರದ ವಿರುದ್ಧ ಧಂಗೆ ಎದ್ದೇಳುವ ಕಾಲ ಬಂದೋದಗಲಿದೆ ಎಂದರು.

ಡಾ.ರಾಘವೇಂದ್ರ ಗೆಜ್ಜಿ, ಮಂಜುನಾಥ ಶಿವಕ್ಕನವರ, ಇತರರಿದ್ದರು.