ಗದಗ ಜಿಲ್ಲೆಯಲ್ಲಿ ಅನಧಿಕೃತ ಲೋಡ್​ ಶೆಡ್ಡಿಂಗ್​

ಪ್ರತಿನಿತ್ಯ ಅಂದಾಜು 40 ಸಾವಿರ ಯುನಿಟ್​ ಕೊರತೆ
Gadag Electricity Shortage
Published on: 

ಶಿವಾನಂದ ಹಿರೇಮಠ ಗದಗ

ಜಿಲ್ಲೆಯಲ್ಲಿ ಅನಧಿಕೃತ ಲೋಡ್​ ಶೆಡ್ಡಿಂಗ್​ ಶುರುವಾಗಿದೆ. ಕೇಂದ್ರ ಕಚೇರಿ ಮೌಖಿಕ ಆದೇಶದಂತೆ ಜಿಲ್ಲೆಯಲ್ಲಿ ಆಯ್ದ ಪ್ರದೇಶಗಳಲ್ಲಿ ಪ್ರತಿನಿತ್ಯ ನಾಲ್ಕರಿಂದ ಐದು ಗಂಟೆಗೂ ಹೆಚ್ಚುಕಾಲ ವಿದ್ಯುತ್​ ಕಡಿತಗೊಳಿಸಲಾಗುತ್ತಿದೆ. ಕೃಷಿ ಚಟುವಟಿಕೆಗಳಿಗೆ ಪೂರೈಕೆ ಮಾಡುತ್ತಿದ್ದ 7 ಗಂಟೆ ವಿದ್ಯುತ್​ ಬದಲಾಗಿ 5 ಗಂಟೆಗೆ ವಿದ್ಯುತ್​ ಕಡಿತಗೊಳಿಸಲಾಗುತ್ತಿದೆ. ಇದರಿಂದ ರೈತವರ್ಗ ಕಂಗಾಲಾಗಿದ್ದು, ಸ್ಥಳಿಯ ವಿದ್ಯುತ್​ ಪೂರೈಕೆ ಕೇಂದ್ರಗಳಿಗೆ ತೆರಳಿ ನೋವು ತೋಡಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಮಳೆ ಕೊರತೆಯಿಂದ ಜಲವಿದ್ಯುಶ್ಚಕ್ತಿ ಉತ್ಪಾದನೆಯಲ್ಲಿ ಕೊರತೆ, ಮೋಡದ ಕಾರಣದಿಂದ ಸೌರಶಕ್ತಿ ಉತ್ಪಾದನೆಯಲ್ಲಿ ಕುಂಠಿತ, ರಾಯಚೂರಿನ ಆರ್​ಟಿಪಿಸಿ ಶಕ್ತಿ ಕೇಂದ್ರಗಳ ಅನಧಿಕೃತ ಸ್ಥಗಿತಗೊಳಿಸುವಿಕೆ ಹಾಗೂ ಪವನ ಶಕ್ತಿ ಉತ್ಪಾದನೆಯಲ್ಲೂ ಇಳಿಕೆ ಕಾಣುತ್ತಿರುವುದರಿಂದ ಜಿಲ್ಲೆ ಹಾಗೂ ರಾಜ್ಯದ ಅನೇಕ ಕಡೆ ಅನಧಿಕೃತ ಲೋಡ ಶೆಡ್ಡಿಂಗ್​ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಗದಗ ಮತ್ತು ರೋಣ ವಿಭಾಗದ 6 ತಾಲೂಕುಗಳನ್ನು ಒಳಗೊಂಡ ಗೃಹೋಪಯೋಗಿ, ವಾಣಿಜ್ಯೋದ್ಯಮ ಕೃಷಿ ಪಂಪಸೆಟ್​, ಶಾಲಾ ಕಾಲೇಜು, ಬೀದಿ ದೀಪ, ನೀರು ಪೂರೈಕೆ ಯಂತ್ರಗಳಿಗೆ ವಿದ್ಯುತ್​ ಪೂರೈಕೆ ಸೇರಿ ಪ್ರತಿ ತಿಂಗಳು ಅಂದಾಜು ಸರಾಸರಿ 62 ಲಕ್ಷ ಯುನಿಟ್​ ವಿದ್ಯುತ್​ ಜಿಲ್ಲೆಗೆ ಅಗತ್ಯವಿದೆ. ಆದರೆ, ಪ್ರಸ್ತುತ 48 ರಿಂದ 50 ಲಕ್ಷ ಯುನಿಟ್​ ಪ್ರತಿತಿಂಗಳು ಪೂರೈಕೆ ಮಾಡಲಾಗುತ್ತಿದೆ. ವಿದ್ಯುತ್​ ಉತ್ಪಾದನೆಯಲ್ಲಿ ತೀವ್ರ ಕುಸಿತದ ಕಾರಣದಿಂದ ಕೇಂದ್ರ ಕಚೇರಿಯಿಂದ ವಿದ್ಯುತ್​ ಹಂಚಿಕೆಯಲ್ಲೂ ವ್ಯತ್ಯಯ ಉಂಟಾಗುತ್ತಿದೆ. ಹಾಗಾಗಿ ಕೇಂದ್ರ ಕಚೇರಿಯ ಅಧಿಕಾರಿಗಳು ವೃತ್ತ ಕಚೇರಿಯ ಅಧಿಕಾರಿಗಳಿಗೆ ಮೌಖಿಕ ಸಂದೇಶ ನೀಡುವ ಮೂಲಕ ಜಿಲ್ಲೆಯ 25 ವಿದ್ಯುತ್​ ಸ್ಟೇಷನ್​ಗಳಿಂದ ವಿದ್ಯುತ್​ ಪೂರೈಕೆ ಕಡಿತಗೊಳಿಸಲು ಸೂಚಿಸಲಾಗುತ್ತಿದೆ. ವಿದ್ಯುತ್​ ಬೇಡಿಕೆ ಮತ್ತು ಪೂರೈಕೆ ಅನುಗುಣವಾಗಿ ವೃತ್ತ ಕಚೇರಿ ಅಧಿಕಾರಿಗಳು ಕೆಲವಡೆ ವಿದ್ಯುತ್​ ಸ್ಥಗಿತಗೊಳಿಸಲು ಸ್ಟೇಷನ್​ ಮೇಲ್ವಿಚಾರಕರಿಗೆ ಸೂಚಿಸುತ್ತಿದ್ದಾರೆ.

ಪ್ರತಿನಿತ್ಯ ಬೇಡಿಕೆ:

ಇಲಾಖೆ ಮಾಹಿತಿ ಪ್ರಕಾರ ಪ್ರತಿನಿತ್ಯ ಜಿಲ್ಲೆಯಲ್ಲಿ ಸರಾಸರಿ 2 ಲಕ್ಷಕ್ಕೂ ಅಧಿಕ ಯುನಿಟ್​ಗಳ ಅಗತ್ಯವಿದೆ. ಪ್ರಸ್ತುತ 1.60 ಲಕ್ಷ ಯುನಿಟ್​ಗಳು ಪೂರೈಕೆ ಆಗುತ್ತಿದೆ. ಕೊರತೆಯ ಅಂದಾಜು 40 ಸಾವಿರ ಯುನಿಟ್​ ವಿದ್ಯುತ್​ ಬೇಡಿಕೆಯನ್ನು ಸರಿದೂಗಿಸಲು ಅನಧಿಕೃತ ಲೋಡಶೆಡ್ಡಿಂಗ್​ ಅನಿವಾರ್ಯ ಎಂದು ಮೂಲಗಳು ತಿಳಿಸಿವೆ.

ಹೆಚ್ಚಿನ ಬೆಲೆಗೆ ಖರೀದಿ:

ರಾಜ್ಯದಲ್ಲಿ ಮಳೆ ಕೊರತೆ ಮತ್ತು ಇತರೆ ಕಾರಣದಿಂದ ವಿದ್ಯುತ್​ ಆಭಾವ ಸೃಷ್ಟಿಯಾ ಹಿನ್ನೆಲೆ ರಾಜ್ಯದ ಬೇರಡೆಯಿಂದ ಹೆಚ್ಚಿನ ಬೆಲೆಗೆ ವಿದ್ಯುತ್​ ಖರೀದಿಸಲಾಗುತ್ತಿದೆ. ಸಾಮಾನ್ಯಗಳಲ್ಲಿ ಪ್ರತಿ ಯುನಿಟ್​ಗೆ 4 ರೂ.ಗೆ ವಿದ್ಯುತ್​ ಖರೀದಿಸಲಾಗುತ್ತದೆ. ಆದರೆ, ಪ್ರಸ್ತುತ ದಿನಗಳಲ್ಲಿ ಸೆಂಟ್ರಲ್​ ಗ್ರಿಡ್​ ನಿಂದ ಪ್ರತಿ ಯುನಿಟ್​ಗೆ 14 ರೂಪಾಯಿಗೂ ಹೆಚ್ಚು ಬೆಲೆ ನೀಡಿ ವಿದ್ಯುತ್​ ಖರೀದಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿದೆ.

ಇಂಡಿಯನ್​ ಎಲೆಕ್ಟ್ರಿಸಿಟಿ ಎಕ್ಸಚೇಂಜ್​:

ಇಂಡಿಯನ್​ ಎಲೆಕ್ಟ್ರಿಸಿಟಿ ಎಕ್ಸಚೇಂಜ್​ ಮಾಹಿತಿ ಪ್ರಕಾರ ಬುಧವಾರ ಜಿಲ್ಲೆ ಹಾಗೂ ರಾಜ್ಯದಲ್ಲಿ ವಿದ್ಯುತ್​ ಕೊರತೆ ಎದುರಾಗಿದೆ. ಹೆಚ್ಚುವರಿ ವಿದ್ಯುತ್​ ಉತ್ಪಾದನೆ ಆಗಿದ್ದ ಸಂದರ್ಭದಲ್ಲಿ ಬೇರೆ ರಾಜ್ಯಗಳಿಗೆ ವಿದ್ಯುತ್​ ಮಾರಾಟ ಮಾಡಿದ್ದನ್ನು ಇಂಡಿಯನ್​ ಎಲೆಕ್ಟ್ರಿಸಿಟಿ ಎಕ್ಸಚೇಂಜ್​ ಮೂಲಕ ವಿದ್ಯುತ್​ ಮರಳಿ ಪಡೆಯುವ ಸಂಪ್ರದಾಯ ಇದೆ. ಹೀಗಿದ್ದರೂ ಬುಧವಾರ ರಾಜ್ಯಕ್ಕೆ ಅಗತ್ಯ ಇರುವಷ್ಟು ವಿದ್ಯುತ್​ ಇಂಡಿಯನ್​ ಎಲೆಕ್ಟ್ರಿಸಿಟಿ ಎಕ್ಸಚೇಂಜ್​ನಲ್ಲಿ ಲಭ್ಯ ಇಲ್ಲದಿರುವುದನ್ನು ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆ ಜತೆಗೆ ವಿದ್ಯುತ್​ ವಲಯವೂ ಕೂಡ ಕಂಗಾಲಾಗಿದ್ದು, ಮಳೆ ಅನಿವಾರ್ಯ ಎಂಬಂತಾಗಿದೆ.

ಕೇಂದ್ರ ಕಚೇರಿ ನಿರ್ದೇಶನದಂತೆ ನಾವು ಲೋಡ್​ ಶೆಡ್ಡಿಂಗ್​ ಮಾಡಬೇಕಾಗುತ್ತದೆ. ಪ್ರಸ್ತುತ ಮಳೆ, ಸೋಲಾರ್​, ಪವನ ಶಕ್ತಿ ಉತ್ಪಾದನೆ ಕೊರತೆ ಎದುರಾಗಿದೆ. ಹಾಗಾಗಿ ಲೋಡ ಶೆಡ್ಡಿಂಗ ಸಾಮಾನ್ಯ. ಆದರೆ ಇದೇ ಶಾಶ್ವತ ಅಲ್ಲ. ಇನ್ನೆರೆಡು ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ.

ನಜ್ಮನ್ನಿಸಾ ಕೆ, ಎಸ್. ​ಇಇ ಹೆಸ್ಕಾಂ ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net