ಮುಂಡರಗಿ: ಜ್ಞಾನಕ್ಕಿಂತ ಮಿಗಿಲಾದದ್ದು ಮತ್ತೊಂದಿಲ್ಲ. ಜ್ಞಾನದಿಂದ (knowledge) ಸಮಾಜದಲ್ಲಿ ಉತ್ತಮ ಗೌರವ ದೊರೆಯುತ್ತದೆ. ಎಲ್ಲರೂ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಂಡು ಓದಿನ ಕಡೆಗೆ ಹೆಚ್ಚಿನ ಆದ್ಯತೆ ನೀಡಿ ಜ್ಞಾನ ಸಂಪತ್ತು ವೃದ್ಧಿಸಿಕೊಳ್ಳಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಹೇಳಿದರು.
ಪಟ್ಟಣದ ಕೆ.ಆರ್. ಬೆಲ್ಲದ ಮಹಾವಿದ್ಯಾಲಯದ ಸಭಾ ಭವನದಲ್ಲಿ ಗ್ರಂಥ ವಿಜ್ಞಾನದ ಪಿತಾಮಹ ಪದ್ಮಶ್ರೀ ಪುರಸ್ಕೃತ ಡಾ. ಎಸ್.ಆರ್. ರಂಗನಾಥನ್ ಅವರ ಜನ್ಮದಿನೋತ್ಸವದ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಪ್ರಸ್ತುತ 33 ಸಾವಿರಕ್ಕೂ ಹೆಚ್ಚು ಮೌಲ್ಯಯುತ ಗ್ರಂಥಗಳ ಸಂಗ್ರಹವಿದೆ. ಕಾಲೇಜು ಪ್ರಾರಂಭವಾದಾಗಿನಿಂದಲೂ ಗ್ರಂಥಾಲಯವನ್ನು ಸತತವಾಗಿ ಅಭಿವೃದ್ಧಿಪಡಿಸಿಕೊಂಡು ಬರಲಾಗಿದೆ. ಕಾಲೇಜು ಗ್ರಂಥಾಲಯ ಮಾತ್ರವಲ್ಲದೆ, ಅನ್ನದಾನೀಶ್ವರ ಗ್ರಂಥಾಲಯದಲ್ಲೂ ಸುಮಾರು 15 ಸಾವಿರಕ್ಕೂ ಹೆಚ್ಚು ಅಪರೂಪದ ಹಾಗೂ ಜ್ಞಾನವರ್ಧಕ ಗ್ರಂಥಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ನಿವೃತ್ತ ಗ್ರಂಥಾಲಯ ಅಧಿಕಾರಿ ಡಾ.ಸಂಗಯ್ಯ ಶಿರೂರಮಠ ಮಾತನಾಡಿ, ಗ್ರಂಥಾಲಯಗಳು ಜ್ಞಾನವನ್ನು ರಕ್ಷಿಸಿ ಮತ್ತು ಸಮಾಜಕ್ಕೆ ನಿರಂತರ ಜ್ಞಾನ ಸೇವೆ ಒದಗಿಸುವ ಅತ್ಯುನ್ನತ ಸ್ಥಳ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗ್ರಂಥಾಲಯಗಳಲ್ಲಿ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯ ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಆರ್.ಎಲ್. ಪೊಲೀಸ್ ಪಾಟೀಲ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಹಾಗೂ ಅಧ್ಯಾಪಕರಲ್ಲಿ ಪುಸ್ತಕ ಓದುವ ಹವ್ಯಾಸ ವಿರಳವಾಗುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.
ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು. ವಿ.ಎಫ್. ಗುಡದಪ್ಪನವರ, ಎಂ.ಜಿ. ಗಚ್ಚಣ್ಣವರ, ಟಿ.ಬಿ. ದಂಡಿನ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ.ಸಂತೋಷ ಹಿರೇಮಠ ಸ್ವಾಗತಿಸಿದರು. ಲತಾ ಕಡ್ಡಿ ನಿರೂಪಿಸಿದರು. ಮಹಾಂತೇಶ ಹೊಸಕೇರಿಮಠ ವಂದಿಸಿದರು.