wealth: ಮನಶಾಂತಿಗಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ

ನರೇಗಲ್ಲ ಸಮೀಪದ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿಗಳ ಪುರಪ್ರವೇಶ ಬುಧವಾರ ಸಂಭ್ರಮದಿಂದ ಜರುಗಿತು.
ನರೇಗಲ್ಲ ಸಮೀಪದ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿಗಳ ಪುರಪ್ರವೇಶ ಬುಧವಾರ ಸಂಭ್ರಮದಿಂದ ಜರುಗಿತು.
Published on
ನರೇಗಲ್ಲ: ಮನುಷ್ಯನ ಜೀವನದಲ್ಲಿ ಮನಶಾಂತಿಯೇ ಅತ್ಯಂತ ದೊಡ್ಡ ಸಂಪತ್ತು. (WEALTH) ಭೌತಿಕ ಸಂಪತ್ತನ್ನು ಬುದ್ಧಿವಂತಿಕೆಯಿಂದ ಸಂಪಾದಿಸಬಹುದು. ಆದರೆ, ಮನಶಾಂತಿಯನ್ನು ಅನುಭವಿಸಲು ದೈವಿಕತೆಯ ಅಗತ್ಯವಿದೆ. ಮನಸ್ಸು ಶಾಂತವಾಗಿದ್ದರೆ ವ್ಯಕ್ತಿ, ಕುಟುಂಬ ಹಾಗೂ ಸಮಾಜದಲ್ಲಿ ಸುಖ-ಶಾಂತಿ ನೆಲೆಸುತ್ತದೆ ಎಂದು ಹಾಲಕೆರೆ ಜಗದ್ಗುರು ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ದೇವಪ್ರಯಾಗದಲ್ಲಿ ಲೋಕ ಕಲ್ಯಾಣಾರ್ಥ ಕೈಗೊಂಡ ಮೌನಾನುಷ್ಠಾನ ಹಾಗೂ ಶಿವಯೋಗ ಸಾಧನೆ ಪೂರ್ಣಗೊಳಿಸಿದ್ದರಿಂದ ಶ್ರೀಮಠದಲ್ಲಿ ಆಯೋಜಿಸಿದ್ದರಿಂದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಹೃದಯದಿಂದ ಜಗತ್ತನ್ನು ನೋಡಿದಾಗ ಮನಶಾಂತಿ ದೊರೆಯುತ್ತದೆ. ಮನಶಾಂತಿ ಪಡೆಯಲು ಲಿಂಗಪೂಜೆ ಅತ್ಯಂತ ಶ್ರೇಷ್ಠ ಸಾಧನೆಯಾಗಿದೆ. ಲಿಂಗಪೂಜೆಯ ಮೂಲ ಉದ್ದೇಶ ದೇವರನ್ನು ಹೊರಗೆ ಹುಡುಕುವುದಲ್ಲ ನಮ್ಮೊಳಗಿನ ದೈವತ್ವವನ್ನು ಅರಿತು ನಾವು ಲಿಂಗಸ್ವರೂಪರಾಗುವುದಾಗಿದೆ. ಭಗವಂತನ ಅನುಗ್ರಹ ದೊರೆತರೆ ಕೇಳದೆಯೇ ಅಗತ್ಯವಿರುವುದೆಲ್ಲ ಲಭಿಸುತ್ತದೆ. ತಾಯಿ ಮಗುವಿನ ಅವಶ್ಯಕತೆಯನ್ನು ತಿಳಿದು ಪೂರೈಸುವಂತೆ, ದೇವರೂ ತನ್ನ ಭಕ್ತನಿಗೆ ಬೇಕಾದುದನ್ನು ಅನುಗ್ರಹಿಸುತ್ತಾನೆ. ಆದ್ದರಿಂದ ದೇವರಲ್ಲಿ ಭಕ್ತಿಯಿಂದ ಶರಣಾಗಬೇಕು ಎಂದರು.
ಗುರು-ಲಿಂಗ-ಜಂಗಮ ತತ್ವಗಳ ಅನುಷ್ಠಾನದಿಂದ ಬದುಕು ಪರಿಪೂರ್ಣವಾಗುತ್ತದೆ. ಉತ್ತರಕಾಶಿ, ಹರಿದ್ವಾರ ಸೇರಿದಂತೆ ಹಿಮಾಲಯದ ಪವಿತ್ರ ಪ್ರದೇಶಗಳಲ್ಲಿ ಅನುಷ್ಠಾನ ನಡೆಸಿದ ಅನುಭವಗಳು ದೈವಾನುಗ್ರಹದ ಸಾಕ್ಷಿಯಾಗಿವೆ ಎಂದರು.
ಡಾ. ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿಡಗುಂದಿಕೊಪ್ಪದ ಶಾಖಾ ಶಿವಯೋಗಮದಿರದ ಚನ್ನಬಸವ ಸ್ವಾಮೀಜಿ, ದರೂರು ಸಂಗನಬಸವೇಶ್ವರ ಮಠದ ಕೊಟ್ಟೂರು ಸ್ವಾಮೀಜಿ, ಕುರುಗೋಡು ಕೊಟ್ಟೂರಸ್ವಾಮಿ ಶಾಖಾಮಠದ ನಿರಂಜನ ಪ್ರಭು ಸ್ವಾಮೀಜಿ, ಬೂದುಗುಂಪ ಕೊಟ್ಟೂರುಸ್ವಾಮಿ ಶಾಖಾಮಠದ ಸಿದ್ಧೇಶ್ವರ ಸ್ವಾಮೀಜಿ, ಶ್ರೀಧರಗಡ್ಡೆ ಕೊಟ್ಟೂರುಸ್ವಾಮಿ ಶಾಖ ಮಠದ ಮರಿಕೊಟ್ಟೂರು ದೇಶಿಕರು ಇದ್ದರು.

ಅದ್ಧೂರಿ ಪುರ ಪ್ರವೇಶ

ದೇವಪ್ರಯಾಗದಲ್ಲಿ ಮೌನಾನುಷ್ಠಾನ ಪೂರೈಸಿ ಹಾಲಕೆರೆ ಗ್ರಾಮಕ್ಕೆ ಆಗಮಿಸಿದ ಶ್ರೀಮುಪ್ಪಿನ ಬಸವಲಿಂಗ ಸ್ವಾಮೀಜಿಯವರ ಪುರ ಪ್ರವೇಶ ಸಮಾರಂಭ ಸಂಭ್ರಮದಿಂದ ನೆರವೇರಿತು. ಸಾರೋಟದಲ್ಲಿ ಶ್ರೀಗಳವರ ಮೆರವಣಿಗೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net