ನರೇಗಲ್ಲ: ಪಟ್ಟಣ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಹೋಳಿ (Holi) ಹಬ್ಬದ ರಂಗು ದಿನದಿನಕ್ಕೆ ಏರುತ್ತಿದ್ದು, ಹಲಗೆಯ ಸದ್ದೂ ಜೋರಾಗಿ ಕೇಳಿ ಬರುತ್ತಿದೆ. ಹೋಳಿ ಹಬ್ಬ ಮುಖ್ಯವಾಗಿ ಪುರುಷರ ಹಬ್ಬವೆಂದೇ ಪ್ರಸಿದ್ಧಿಯಾಗಿದೆ. ಈ ಹಬ್ಬದಲ್ಲಿ ಕಾಮನನ್ನು ಸುಡುವುದರ ಜತೆಗೆ ಬಣ್ಣ ಆಡಿ ಹೊಯ್ಕಳ್ಳುವುದು ಸಾಮಾನ್ಯವಾಗಿರುತ್ತದೆ. ಹೊಯ್ಕಂಡವರ ಬಾಯಿಗೆ ಹೋಳಿಗೆ ಎಂದು ಮಹಿಳೆಯರು ಮನೆಗಳಲ್ಲಿ ಹೋಳಿಗೆಯನ್ನು ಮಾಡಿ ಬಣ್ಣವಾಡಿ ಬಂದ ಗಂಡಸರಿಗೆ, ಬಾಲಕರಿಗೆ, ಮನೆ ಮಂದಿಗೆಲ್ಲ ಹೋಳಿಗೆ ಊಟ ಬಡಿಸುತ್ತಾರೆ. ಓಣಿಗಳಲ್ಲಿ ಹಲಗೆಯ ಸದ್ದು ಮಾರ್ದನಿಸುತ್ತಿದೆ. ಚರ್ಮದ ಹಲಗೆಗಳಿಗಿಂತ ಫೈಬರ್ ಹಲಗೆಗಳಿಗೆ ಬೇಡಿಕೆ ಜಾಸ್ತಿಯಾಗಿದೆ. 650 ರೂ.ಗಳಿಂದ 1,500 ರೂ.ಗಳವರೆಗೆ ಹಲಗೆಗೆಳು ಮಾರಾಟವಾಗುತ್ತಿವೆ. ಚಿತ್ರ ನಟ, ನಟಿಯರ ಭಾವಚಿತ್ರಗಳನ್ನು ಒಳಗೊಂಡ ಹಲಗೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ರತಿ-ಮನ್ಮಥರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.