ruined all crop ಕೈಕೊಟ್ಟ ಮುಂಗಾರು ಬೆಳೆಯೆಲ್ಲ ಹಾಳು

ಮಳೆಯಿಲ್ಲದೆ ಹೆಸರು ಬೆಳೆ ಸಂಪೂರ್ಣ ಕುಂಠಿತವಾಗಿ ನೆಲಕಚ್ಚಿರುವುದು.
ಮಳೆಯಿಲ್ಲದೆ ಹೆಸರು ಬೆಳೆ ಸಂಪೂರ್ಣ ಕುಂಠಿತವಾಗಿ ನೆಲಕಚ್ಚಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮಳೆ ಕೊರತೆಯಿಂದ ಇಳುವರಿ ಕುಂಠಿತ
  • ಬಿತ್ತನೆ ಮಾಡಿದ್ದ ರೈತರಿಗೆ ಪೆಟ್ಟು
ಮಲ್ಲು ಕಳಸಾಪುರ ಲಕ್ಷ್ಮೇಶ್ವರ
ಮುಂಗಾರು ಆರಂಭದಲ್ಲಿ ಸುರಿದ ಒಂದೆರಡು ಮಳೆಯಿಂದ ಈ ಬಾರಿ ಕೃಷಿ ಚೇತರಿಸಿಕೊಳ್ಳಲಿದೆ ಎಂಬ ನಿರೀಕ್ಷೆಯಲ್ಲಿದ್ದ ತಾಲೂಕಿನ ರೈತರು ಅತ್ಯುತ್ಸಾಹದಿಂದ ವಿವಿಧ ಬೆಳೆಗಳ ಬೀಜ ಬಿತ್ತನೆ ಮಾಡಿದ್ದರು. ಬಿತ್ತನೆ ನಂತರ ಮಳೆ ಇಲ್ಲದೆ ಬೆಳೆಗಳೆಲ್ಲ ಕಮರಿದ್ದರಿಂದ, ಈ ಸಲವಾದರೂ ಚೇತರಿಸಿಕೊಳ್ಳಬಹುದು ಎಂಬ ರೈತರ ಆಶಯಗಳೆಲ್ಲ ಹುಸಿಯಾಗಿವೆ.
ಮುಂಗಾರಿನ ಪ್ರಮುಖ ಹೆಸರು ಬೆಳೆ ಬಹುತೇಕ ಹಾಳಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತಮ ಬೆಲೆ ಹಾಗೂ ಕಡಿಮೆ ಅವಧಿಯಲ್ಲಿ ಆದಾಯ ತರುವ ಬೆಳೆಯಾಗಿರುವುದರಿಂದ ಈ ಬಾರಿ ರೈತರು ಹೆಸರು ಬೆಳೆಯತ್ತ ಹೆಚ್ಚಿನ ಒಲವು ತೋರಿದ್ದರು. ಕಡಿಮೆ ಮಳೆಯಾದರೂ ಹೆಸರು ಬೆಳೆಯುತ್ತದೆ ಎಂಬ ಆಶಾಭಾವವಿತ್ತು. ಅಲ್ಲದೆ, ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ 8780 ರೂ. ಬೆಂಬಲ ಬೆಲೆ ಘೋಷಿಸಿತ್ತು. ಆದರೆ, ಜುಲೈನಲ್ಲಿ ಹೂ ಬಿಡುವ ಹಾಗೂ ಕಾಳು ಕಟ್ಟುವ ಹಂತದಲ್ಲಿ ವರುಣನ ಅವಕೃಪೆಯಿಂದಾಗಿ ಹೆಸರು ಗಿಡಗಳೆಲ್ಲ ಒಣಗುತ್ತಿದ್ದು, ರೈತರಿಗೆ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತೆ ಸಂಕಟವಾಗುತ್ತಿದೆ.
ಮುಂಗಾರು ಹಂಗಾಮಿನಲ್ಲಿ ಲಕ್ಷ್ಮೇಶ್ವರ ತಾಲೂಕಿನಲ್ಲಿ 33,067 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದ್ದು, ಅದರಲ್ಲಿ 5,100 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತಲಾಗಿತ್ತು. ಮಳೆ ಇಲ್ಲದ್ದರಿಂದ ಬೆಳೆ ಮೇಲೇಳದೆ ಗಿಡದಲ್ಲಿ ಮೂರ‌್ನಾಲ್ಕು ಎಳೆಯ ಕಾಯಿ ಬಿಟ್ಟು ಅವಧಿ ಪೂರ್ವದಲ್ಲಿಯೇ ಒಣಗಿವೆ. ಎಕರೆಗೆ ಸರಾಸರಿ 5 ಕ್ವಿಂಟಾಲ್ ಹೆಸರು ಬೆಳೆಯುವ ರೈತರು ಈಗ ಒಂದು ಕ್ವಿಂಟಾಲ್‌ಗೂ ಪರದಾಡುವಂತಾಗಿದೆ. ಇದರಿಂದ ಬಿತ್ತನೆಗೆ ಮಾಡಿದ ಖರ್ಚೂ ಬರದಂತಾಗಿದೆ. ಶುಕ್ರವಾರ ಲಕ್ಷ್ಮೇಶ್ವರ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಹೆಸರು ಕಾಳಿಗೆ 10,548 ರೂ.ಗಳಿಗೆ ಮಾರಾಟವಾಗಿದೆ.
ಬಿತ್ತನೆಗೆ 30 ಸಾವಿರ ರೂ. ಖರ್ಚು
ಒಂದು ಎಕರೆಗೆ ಹೆಸರು ಬೀಜ, ಗೊಬ್ಬರ, ಕೀಟನಾಶಕ, ಉಳುಮೆ, ಬಿತ್ತನೆ ಹಾಗೂ ಕೂಲಿಗಾಗಿ 25ರಿಂದ 30 ಸಾವಿರ ರೂ. ಖರ್ಚು ಮಾಡಲಾಗಿದೆ. ಅನೇಕ ರೈತರು ಬ್ಯಾಂಕ್, ಸಹಕಾರ ಸಂಘಗಳು ಹಾಗೂ ಖಾಸಗಿ ಮೂಲಗಳಿಂದ ಸಾಲ ಪಡೆದಿದ್ದಾರೆ. ಆದರೆ, ಬೆಳೆ ಕೈಗೆ ಬಾರದೆ , ಸಾಗುವಳಿಗೆ ಮಾಡಿದ ಖರ್ಚೂ ವಾಪಸ್ ಬರದಂತಾಗಿದೆ. ಮಳೆ ಅಭಾವದಿಂದ ಮೇವು, ಬೆಳೆ ಒಣಗಿ ಜಾನುವಾರುಗಳ ನಿರ್ವಹಣೆಯೂ ಕಷ್ಟಕರವಾಗಿದೆ. ಕೆರೆ, ಕಟ್ಟೆ ಹಾಗೂ ಕೃಷಿ ಹೊಂಡಗಳ ನೀರಿನ ಮಟ್ಟವೂ ಕುಸಿಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಅಂತರ್ಜಲ ಮಟ್ಟ ಕುಸಿತ ಸಹ ಆಗುವ ಆತಂಕ ಕಾಡುತ್ತಿದೆ.

ಕಳೆದ ವರ್ಷ ಹೆಸರು ಸಮೃದ್ಧವಾಗಿ ಬೆಳೆದರೂ ಅತಿವೃಷ್ಟಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿತ್ತು. ಈ ಬಾರಿ ಅನಾವೃಷ್ಟಿಯಿಂದಾಗಿ ಬಿತ್ತಿದ ಹೆಸರು ಬೆಳೆ ಕೈ ಸೇರಲಿಲ್ಲ. ಸಾಲದ ಸುಳಿಯಲ್ಲಿ ಸಿಲುಕಿರುವ ರೈತರ ಸ್ಥಿತಿ ಚಿಂತಾಜನಕವಾಗಿದೆ. ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಬೆಳೆ ಹಾನಿಯ ಸಮೀಕ್ಷಾ ವರದಿ ಸಲ್ಲಿಸಿ ಬೆಳೆ ಹಾನಿ ಪರಿಹಾರ, ಬೆಳೆ ವಿಮೆ ಪರಿಹಾರ, ಕೃಷಿ ಸಾಲ ಮರುಪಾವತಿಗೆ ಕಾಲಾವಕಾಶ ಹಾಗೂ ಹಿಂಗಾರು ಹಂಗಾಮಿಗೆ ಉಚಿತ ಬಿತ್ತನೆ ಬೀಜ ಪೂರೈಸಬೇಕು.

— ಬಸಣ್ಣ ಬೆಟಗೇರಿ, ಸೋಮನಗೌಡ ಪಾಟೀಲ ಪ್ರಗತಿಪರ ರೈತರು

ತಾಲೂಕಿನಾದ್ಯಂತ ಬೆಳೆ ಹಾನಿಯ ಮಾಹಿತಿ ಸಂಗ್ರಹಿಸಲಾಗುತ್ತಿದೆ. ತಾಲೂಕು ಬರಪೀಡಿತ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ರೈತರು ಬೆಳೆ ದರ್ಶಕ ಆ್ಯಪ್‌ನಲ್ಲಿ ಕಡ್ಡಾಯವಾಗಿ ಫಸಲ್ ಸರ್ವೇ (ಬೆಳೆ ದೃಢೀಕರಣ) ಮಾಡಿಸಿಕೊಳ್ಳಬೇಕು. ಬೆಳೆ ವಿಮೆ ಪಾವತಿಸಬೇಕು. ಅರ್ಹ ರೈತರಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ತಲುಪಿಸಲು ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ.

— ಚಂದ್ರಶೇಖರ ನರಸಮ್ಮನವರ ಸಹಾಯಕ ಕೃಷಿ ಅಧಿಕಾರಿ, ಲಕ್ಷ್ಮೇಶ್ವರ


ಪೋಟೋ: 24-ಎಲ್‌ಎಕ್ಷ್‌ಆರ್-1
ಪೋಟೋ: 24-ಎಲ್‌ಎಕ್ಷ್‌ಆರ್-1.ಎ
ಅವಧಿ ಪೂರ್ಣದಲ್ಲಿಯೇ ಒಣಗಿರುವ ಹೆಸರು.
ಪೋಟೋ: 24-ಎಲ್‌ಎಕ್ಷ್‌ಆರ್-1.ಬಿ
ಹೆಸರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net