sowing: ಮಳೆ ತಂದ ಸಂತಸ ‘ಬಿತ್ತನೆಗೆ ಉಲ್ಲಾಸ’

ಶಿರಹಟ್ಟಿಯ ಜಮೀನೊಂದರಲ್ಲಿ ಯಂತ್ರದ ಮೂಲಕ ಬಿತ್ತನೆ ಮಾಡುತ್ತಿರುವುದು.
ಶಿರಹಟ್ಟಿಯ ಜಮೀನೊಂದರಲ್ಲಿ ಯಂತ್ರದ ಮೂಲಕ ಬಿತ್ತನೆ ಮಾಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸಕಾಲಕ್ಕೆ ವರುಣದೇವನ ಎಂಟ್ರಿ
  • ಶಿರಹಟ್ಟಿ ತಾಲೂಕಿನಲ್ಲಿ ಗರಿಗೆದರಿದ ಕೃಷಿ
  • ರೈತರಲ್ಲಿ ಹೊಸ ಭರವಸೆ
ಶಿರಹಟ್ಟಿ: ತಾಲೂಕಿನಾದ್ಯಂತ ಜೂನ್ ಮೊದಲ ವಾರದಲ್ಲಿಯೇ ಮಳೆರಾಯ ಭರ್ಜರಿ ಎಂಟ್ರಿ ಕೊಟ್ಟಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಿದ್ದು, ಎಲ್ಲೆಡೆ ಬಿತ್ತನೆ (sowing) ಕಾರ್ಯ ಅತ್ಯಂತ ಚುರುಕಿನಿಂದ ಸಾಗಿದೆ. ಮುಂಗಾರು ಮಳೆ ಆರಂಭಕ್ಕೂ ಮೊದಲೇ ತಮ್ಮ ಹೊಲ-ಗದ್ದೆಗಳನ್ನು ಹದ ಮಾಡಿಕೊಂಡಿದ್ದ ರೈತರು, ಸಮಯಕ್ಕೆ ಸರಿಯಾಗಿ ಮಳೆಯಾಗಿದ್ದರಿಂದ ಅತ್ಯುತ್ಸಾಹದಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.
ತಾಲೂಕಿನಲ್ಲಿ ಈ ಬಾರಿ ಒಟ್ಟು 36,430 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಮಾಡುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ವಾತಾವರಣ ಅನುಕೂಲಕರವಾಗಿರುವುದರಿಂದ ಈಗಾಗಲೇ 10,355 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಹೆಚ್ಚಾಗಿ ಮೆಕ್ಕೆಜೋಳ ಮತ್ತು ಹೆಸರು ಬಿತ್ತನೆ ಮಾಡಲಾಗುತ್ತಿದೆ. ಒಟ್ಟು 29,500 ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆ ಗುರಿಯ ಪೈಕಿ ಈಗಾಗಲೇ 8,500 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. 2,020 ಹೆಕ್ಟೇರ್ ಹೆಸರು ಬಿತ್ತನೆ ಗುರಿಯಲ್ಲಿ 1,220 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಅಚ್ಚರಿಯೆಂದರೆ ಕೇವಲ 150 ಹೆಕ್ಟೇರ್‌ನಲ್ಲಿ ಮಾತ್ರ ತೊಗರಿ ಬಿತ್ತನೆ ಗುರಿ ಹೊಂದಲಾಗಿತ್ತಾದರೂ, ರೈತರು ಉತ್ಸಾಹದಿಂದ ಈಗಾಗಲೇ 550 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಿ ಗುರಿ ಮೀರಿದೆ. ಇನ್ನುಳಿದಂತೆ ಹತ್ತಿ 625 ಹೆಕ್ಟೇರ್ ಗುರಿಯಲ್ಲಿ 45 ಹೆಕ್ಟೇರ್ ಹಾಗೂ ಶೇಂಗಾ 2,610 ಹೆಕ್ಟೇರ್ ಗುರಿಯಲ್ಲಿ 25 ಹೆಕ್ಟೇರ್ ಬಿತ್ತನೆ ಕಾರ್ಯಗಳು ಕೂಡ ಆರಂಭಿಕ ಹಂತದಲ್ಲಿದ್ದು, ಮಳೆ ಬಿಡುವು ನೀಡುತ್ತಿದ್ದಂತೆ ಮತ್ತಷ್ಟು ಚುರುಕಾಗಲಿವೆ.
ಹೆಚ್ಚುವರಿ ಮಳೆ ತಂದ ಹರ್ಷ ಮತ್ತು ಆತಂಕ:
ಜನವರಿ 1ರಿಂದ ಜೂನ್ 4ರವರೆಗೆ ತಾಲೂಕಿನಲ್ಲಿ ಆಗಬೇಕಿದ್ದ ವಾಡಿಕೆ ಮಳೆ 130.9 ಮಿಮೀಗಿಂತ ಈ ಬಾರಿ ಬರೋಬ್ಬರಿ 176.9 ಮಿಮೀ ಮಳೆ ಸುರಿದಿದ್ದು, ಶೇಕಡಾ 35 ರಷ್ಟು ಹೆಚ್ಚುವರಿ ಮಳೆಯಾಗಿದೆ. ರಭಸದ ಮಳೆಗೆ ಕಡಕೋಳ ಹಾಗೂ ಹಂಗನಕಟ್ಟಿ ಮಾರ್ಗದ ಹಳ್ಳಗಳು ತುಂಬಿ ಹರಿದಿವೆ. ಆದರೆ, ಈ ಆರಂಭಿಕ ಭರ್ಜರಿ ಮಳೆ ಕೆಲವು ರೈತರಲ್ಲಿ ಆತಂಕವನ್ನೂ ಸೃಷ್ಟಿಸಿದೆ. ಈಗಾಗಲೇ ಹೆಸರು ಬಿತ್ತನೆ ಮಾಡಿದ್ದ ಕೆಲವು ಹೊಲಗಳಲ್ಲಿ ನೀರು ನಿಂತು, ಬಿತ್ತನೆ ಬೀಜ ಹಾಗೂ ಗೊಬ್ಬರ ತೇಲಿಕೊಂಡು ಹೋಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಕಳೆದ 3-4 ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿಯುತ್ತಿರುವುದರಿಂದ ರೈತರಿಗೆ ಹೊಲಕ್ಕೆ ಇಳಿದು ಕೆಲಸ ಮಾಡಲು ಸಾಧ್ಯವಾಗದಂತಾಗಿದೆ. ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು, ಮಳೆ ತುಸು ತಗ್ಗಿದರೆ ಸಾಕು ಬಾಕಿ ಉಳಿದ ಬಿತ್ತನೆ ಕಾರ್ಯ ಪೂರ್ಣಗೊಳ್ಳಲಿದೆ ಎನ್ನುತ್ತಾರೆ ಸ್ಥಳೀಯ ರೈತರು.

ಗೊಬ್ಬರ ದಾಸ್ತಾನು...

ರೈತರ ಬೇಡಿಕೆಗೆ ತಕ್ಕಂತೆ ಕೃಷಿ ಇಲಾಖೆಯು ತಾಲೂಕಿನಲ್ಲಿ 1267.97 ಮೆಟ್ರಿಕ್ ಟನ್ ಯೂರಿಯಾ ಮತ್ತು 233.15 ಮೆಟ್ರಿಕ್ ಟನ್ ಡಿಎಪಿ ರಸಗೊಬ್ಬರವನ್ನು ಮುಂಜಾಗ್ರತೆಯಾಗಿ ದಾಸ್ತಾನು ಮಾಡಿಕೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ಶಿವಕುಮಾರ ಕಾಶಪ್ಪನವರ, ’ಕಳೆದ ವರ್ಷದ ಮುಂಗಾರು ಹಂಗಾಮಿಗೆ ಹೋಲಿಸಿದರೆ ಈ ಬಾರಿ ಬೆಳೆಯ ಬಿತ್ತನೆ ಗುರಿಯನ್ನು ಹೆಚ್ಚಿಸಲಾಗಿದೆ. ಸದ್ಯ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಅಧಿಕೃತ ಮಾರಾಟಗಾರರ ಬಳಿ ಮಾತ್ರ ಖರೀದಿಸಬೇಕು ಮತ್ತು ಕಡ್ಡಾಯವಾಗಿ ರಸೀದಿಯನ್ನು ಪಡೆದುಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

ನಾಲ್ಕು ದಿನಗಳ ಹಿಂದಷ್ಟೇ ಹೆಸರು ಬಿತ್ತನೆ ಮಾಡಲಾಗಿತ್ತು. ಆದರೆ, ಸದ್ಯ ಮಳೆ ಪ್ರಮಾಣ ಹೆಚ್ಚಾಗಿ ಭೂಮಿ ಹಸಿಯಾಗಿದೆ. ಮಳೆರಾಯ ಸ್ವಲ್ಪ ಬಿಡುವು ಕೊಟ್ಟರೆ ಇನ್ನುಳಿದ ಬಿತ್ತನೆ ಕಾರ್ಯವನ್ನು ಸುಲಭವಾಗಿ ಮುಗಿಸುತ್ತೇವೆ.

— ಚನ್ನಪ್ಪ ಕುಳಗೇರಿ, ಶಿರಹಟ್ಟಿ ರೈತ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net