ಮಗನ ಮದುವೆ ನಿಂತೇ ಹೋಯಿತು ಎಂದು ವರನ ತಂದೆ- ತಾಯಿ ಚಿಂತಾಕ್ರಾಂತರಾಗಿ ಕುಳಿತಾಗ ಕಸಬಾ ಓಣಿಯ ಗುರು- ಹಿರಿಯರು ಒಂದಾಗಿ, ‘ಮದುವೆ ನಿಲ್ಲಿಸುವುದು ಬೇಡ‘ ಎಂದು ವರನ ತಂದೆ-ತಾಯಿಗೆ ಧೈರ್ಯ ತುಂಬಿದರು. ಕೂಡಲೇ ಬೇರೆ ಕನ್ಯೆಯ ಹುಡುಕಾಟ ಪ್ರಾರಂಭಿಸಿದರು. ಮೊಬೈಲ್‌ನಲ್ಲೇ ಬಂಧು- ಬಾಂಧವರನ್ನು ಸಂಪರ್ಕಿಸಿ, ಹುಡುಗಿಗಾಗಿ ಶೋಧ ನಡೆಸಿದರು. ಅಂತಿಮವಾಗಿ ರಾಮದುರ್ಗ ತಾಲೂಕಿನ ಕೆ. ಚಂದರಗಿಯ ಗೌರಿ ಮದುವೆಗೆ ಮನಸು ಮಾಡಿದ ಸಿಹಿ ಸುದ್ದಿ ಬಂದಿತು. ಆಕೆಯ ತಂದೆ- ತಾಯಿಗೆ, ಮದುವೆಗೆ ಅಡ್ಡಿಯಾದ ವಾಸ್ತವ ಸ್ಥಿತಿಗತಿಗಳ ಬಗ್ಗೆ ಹಿರಿಯರು ಮನವರಿಕೆ ಮಾಡಿದಾಗ ಯುವತಿ ಹಾಗೂ ಆಕೆಯ ಪಾಲಕರು ಮದುವೆಗೆ ಖುಷಿಯಿಂದಲೇ ಒಪ್ಪಿಗೆ ಸೂಚಿಸಿದರು. ಕೆಲವೇ ತಾಸುಗಳಲ್ಲಿ ಗುರು- ಹಿರಿಯರು ನವ ವಧುವಿನೊಂದಿಗೆ ಮದುವೆ ಮಂಟಪಕ್ಕೆ ಹಾಜರಾದರು. ನಿಗದಿಯಾದ ಶುಭ ಮುಹೂರ್ತದಲ್ಲೇ ನಿರ್ವಿಘ್ನವಾಗಿ ಮದುವೆಯನ್ನು ನೆರವೇರಿಸಲಾಯಿತು. ಅಲ್ಲಿ ಸೇರಿದ್ದ ಹುಡುಗನ ಕಡೆಯವರೆಲ್ಲ ನಿಟ್ಟುಸಿರು ಬಿಟ್ಟರು.