store!: ಪುರಸಭೆ ಮಳಿಗೆಯಲ್ಲಿ ಇದೆಂಥ ಅವ್ಯವಹಾರ!

ಲಕ್ಷ್ಮೇಶ್ವರ ಪುರಸಭೆ ವಾಣಿಜ್ಯ ಮಳಿಗೆಗಳ ಅವ್ಯವಹಾರ ಖಂಡಿಸಿ ವಿವಿಧ ಸಂಘಟನೆಗಳವರು ಮಂಗಳವಾರ ಪ್ರತಿಭಟನೆ ನಡೆಸಿದರು. ಶರಣು ಗೋಡಿ, ಬಸವರಾಜ ಹಿರೇಮನಿ, ಇಸ್ಮಾಯಿಲ್ ಆಡೂರ, ನಾಗೇಶ ಅಮರಾಪುರ, ಸುರೇಶ ಹಟ್ಟಿ, ಮಂಜುನಾಥ ಮುಳಗುಂದ ಇತರರಿದ್ದರು.
ಲಕ್ಷ್ಮೇಶ್ವರ ಪುರಸಭೆ ವಾಣಿಜ್ಯ ಮಳಿಗೆಗಳ ಅವ್ಯವಹಾರ ಖಂಡಿಸಿ ವಿವಿಧ ಸಂಘಟನೆಗಳವರು ಮಂಗಳವಾರ ಪ್ರತಿಭಟನೆ ನಡೆಸಿದರು. ಶರಣು ಗೋಡಿ, ಬಸವರಾಜ ಹಿರೇಮನಿ, ಇಸ್ಮಾಯಿಲ್ ಆಡೂರ, ನಾಗೇಶ ಅಮರಾಪುರ, ಸುರೇಶ ಹಟ್ಟಿ, ಮಂಜುನಾಥ ಮುಳಗುಂದ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭುಗಿಲೆದ್ದ ವಿವಿಧ ಸಂಘಟನೆಗಳ ಕಾರ್ಯಕರ್ತರ ಆಕ್ರೋಶ
  • ಅವ್ಯವಹಾರದ ವಿರುದ್ಧ ಕ್ರಮಕ್ಕೆ ಆಗ್ರಹ
  • ಕೆಲ ಅಂಗಡಿಗಳಿಗೆ ಅಧಿಕಾರಿಗಳಿಂದ ಬೀಗ
ಲಕ್ಷ್ಮೇಶ್ವರ: ಲೀಜ್ ಹಾಗೂ ಟೆಂಡರ್ ಅವಧಿ ಮುಗಿದಿರುವ ಪಟ್ಟಣದ ಹೊಸ ಬಸ್‌ನಿಲ್ದಾಣ ಹತ್ತಿರದ ಪುರಸಭೆ ವಾಣಿಜ್ಯ ಮಳಿಗೆಗಳನ್ನು (STORE) ಪುರಸಭೆ ಕೂಡಲೇ ವಶಕ್ಕೆ ತೆಗೆದುಕೊಳ್ಳಬೇಕು ಮತ್ತು ಮಳಿಗೆಯಲ್ಲಿ ನಿಯಮ ಮೀರಿ ಮಾಂಸ, ಎಗ್‌ರೈಸ್ ಮಾರಾಟ ಮಾಡುವ ಅಂಗಡಿಗಳನ್ನು ತೆರವುಗೊಳಿಸಬೇಕು ಹಾಗೂ ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳವರು ಮಂಗಳವಾರ ಮಳಿಗೆ ಮುಂದೆ ಪ್ರತಿಭಟನೆ ನಡೆಸಿದರು.
ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಶರಣು ಗೋಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆ ಅಧ್ಯಕ್ಷ ಬಸವರಾಜ ಹಿರೇಮನಿ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಇಸ್ಮಯಿಲ್ ಆಡೂರ ಮಾತನಾಡಿ, ಮಳಿಗೆಗಳ ಹರಾಜು ಅವಧಿ 2023ಕ್ಕೆ ಮುಗಿದರೂ ಪುರಸಭೆಯವರು ಮರು ಟೆಂಡರ್ ಕರೆಯದೇ ಮಳಿಗೆ (STORE) ಪಡೆದವರ ತಾಳಕ್ಕೆ ಕುಣಿಯುತ್ತಿದ್ದಾರೆ. ಪುರಸಭೆ ಸದಸ್ಯರಾಗಿದ್ದವರೇ ಮಳಿಗೆಗಳನ್ನು ಪಡೆದುಕೊಂಡಿದ್ದಾರೆ ಮತ್ತು ಒಬ್ಬರೇ 4 ಮಳಿಗೆಗಳನ್ನು ಪಡೆದು ಬಾಡಿಗೆ ಕೊಟ್ಟಿದ್ದಾರೆ. ಒಟ್ಟು 29 ಮಳಿಗೆಗಳಿದ್ದು ಟೆಂಡರ್ ಪಡೆದ ಬಹುತೇಕರು ಯಾವುದೇ ಮಾರ್ಗಸೂಚಿ ಪಾಲಿಸದೇ ಮನಸೂ ಇಚ್ಛೆ ನಡೆದುಕೊಳ್ಳುತ್ತಿದ್ದಾರೆ ಎಂದರು.
ನಿಯಮದ ಪ್ರಕಾರ ವಾಣಿಜ್ಯ ಮಳಿಗೆಯಲ್ಲಿ ಮಾಂಸ, ಎಗ್‌ರೈಸ್ ಮಾರಾಟ ನಿಷಿದ್ಧ. ಆದರೆ ಇಲ್ಲಿ ಅದರದ್ದೇ ಅಬ್ಬರ. ಸಂಕೀರ್ಣ ಗಬ್ಬು ವಾಸನೆ ಬೀರುತ್ತದೆ. ಇಲ್ಲಿನ ಎಟಿಎಂ, ಔಷಧ, ಅಂಗಡಿ, ಬೇಕರಿ, ಹೂವು, ಹಣ್ಣಿನ ಮಳಿಗೆಗಳಿಗೆ ಮಹಿಳೆಯರು, ಮಕ್ಕಳು ಬರುವ ಸ್ಥಿತಿಯೇ ಇಲ್ಲ. ಇಲ್ಲಿ ಆಹಾರದ ಗುಣಮಟ್ಟ, ಶುದ್ಧ ನೀರು, ಸ್ವಚ್ಛತೆ ಮರೀಚಿಕೆಯಾಗಿದೆ. ಆಹಾರಕ್ಕೆ ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್‌ಗಳ ಯಥೇಚ್ಚ ಬಳಕೆಯಾಗುತ್ತಿದೆ. ನಿಯಮಾನುಸಾರ ಟೆಂಡರ್ ಪಡೆದವರು ಬೇರೆಯವರಿಗೆ ಬೇರೆ ಉದ್ದೇಶಕ್ಕೆ ಅಂಗಡಿ ಕೊಡುವಂತಿಲ್ಲ. ಆದರೆ ಮಳಿಗೆಗಳಲ್ಲಿ ಅನಧಿಕೃತ, ನಿಯಮ ಮೀರಿ ನಡೆದುಕೊಳ್ಳುತ್ತಿದ್ದವರೇ ಹೆಚ್ಚು ಇದಕ್ಕೆ ಅಧಿಕಾರಿಗಳ, ಜನಪ್ರತಿನಿಧಿಗಳ ಶ್ರೀರಕ್ಷೆಯೂ ಇದೆ. ಲಕ್ಷಾಂತರ ರೂ ಬಾಡಿಗೆ ಪಡೆಯುವ ಪುರಸಭೆಯು 15/20 ವರ್ಷಗಳಿಂದ ಸುಣ್ಣ, ಬಣ್ಣ ಮಾಡದೆ. ದುರಸ್ತಿಯೂ ಮಾಡದ್ದರಿಂದ ಮಳಿಗೆಗಳ ಸ್ಥಿತಿ ಅಧೋಗತಿಗೆ ತಲುಪಿವೆ’ ಎಂದರು.
ಈ ವೇಳೆ ಪುರಸಭೆ ಮಾಜಿ ಸದಸ್ಯ ಅನೀಲ ಮುಳಗುಂದ ಮತ್ತು ಕೆಲ ಅಂಗಡಿಕಾರರು ಪುರಸಭೆಯ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು. ಕೆಲ ಹೊತ್ತು ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಸಿಪಿಐ ಬಿ.ವೈ ನ್ಯಾಮಗೌಡ್ರ, ಪಿಎಸ್‌ಐ ನಾಗರಾಜ ಗಡಾದ, ಟಿ.ಕೆ ರಾಟೋಡ ಮತ್ತು ಸಿಬ್ಬಂದಿ ಪರಿಸ್ಥಿತಿ ನಿಭಾಯಿಸಿದರು.
ಪ್ರತಿಭಟನೆಗೆ ಮಣಿದ ಪುರಸಭೆ ಅಧಿಕಾರಿಗಳು ಮಾಂಸ, ಎಗ್‌ರೈಸ್ ಮಾನ್ಯತೆ, ದಾಖಲೆ ಇಲ್ಲದ ಮತ್ತು ನಿಯಮ ಮೀರಿದ ಒಟ್ಟು 7 ಅಂಗಡಿಗಳನ್ನು ಖಾಲಿ ಮಾಡಿಸಿ ಸೀಜ್ ಮಾಡಿದರು. 3 ಸಂಕೀರ್ಣದ ಎಲ್ಲ ಮಳಿಗೆಗಳ ಟೆಂಡರ್ ಪ್ರಕ್ರಿಯೆಯನ್ನು ಜುಲೈನೊಳಗೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ನಾಗೇಶ ಅಮರಾಪುರ, ಸುರೇಶ ಹಟ್ಟಿ, ಮಂಜುನಾಥ ಮುಳಗುಂದ, ರಮೇಶ ಹಂಗನಕಟ್ಟಿ, ಮಾಂತೇಶ ಗುದ್ನ್ಯಾಳ, ಇಲಿಯಾಸ್‌ಮೀರಾನವರ, ಲೋಕೇಶ ಶರಸೂರಿ, ಮೈಲಾರಿ ಹೆಗ್ಗಣ್ಣವರ, ಎನ್.ಎಂ.ಆಡೂರ, ಎಂ.ಕೆ.ಕುಡಚಿ, ಮಹೇಶ ಸೂರಣಗಿ, ವೀರಭದ್ರಯ್ಯ ಮಠಪತಿ, ಪ್ರವೀಣ ಆಚಾರಿ, ನಿಂಗಪ್ಪ ಕುರಟ್ಟಿ, ಇಸಾಕಬಾಷಾ ಹರಪನಹಳ್ಳಿ, ಬಸಣ್ಣ ಮೇಲೇರಿ, ಮೈನು ಮೊಮಿನ್, ಹಾಲಪ್ಪ ಭಂಡಾರಿ, ನಜೀರ ಬಾಗಲಕೋಟ, ಗೌಸ ಜಮಖಂಡಿ, ಬರಕತಲಿ ಮುಳಗುಂದ, ದುದ್ದು ರತನಖಾನ್, ಯಲ್ಲಪ್ಪ ಹಂಜಗಿ, ರಾಜು ಕೆರೆಕೊಪ್ಪದ, ಪುರಸಭೆ ಅಧಿಕಾರಿಗಳಾದ ಮಂಜುಳಾ ಹೂಗಾರ, ಮಂಜುನಾಥ ಮುದಗಲ್, ಸುರೇಶ ಪೂಜಾರ, ಹನಮಂತಪ್ಪ ನಂದೆಣ್ಣವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net