ಬೆಳ್ಳಟ್ಟಿ ಗ್ರಾಮದಿಂದ ಪೈಪ್‌ಲೈನ್ ಮೂಲಕ ಆದ್ರಳ್ಳಿ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಆದ್ರಳ್ಳಿ ಸಮೀಪ ಪೈಪ್‌ಲೈನ್ ಒಡೆದಿರುವುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಸದ್ಯ ದುರಸ್ತಿ ಕಾರ್ಯ ನಡೆಯುತ್ತಿದ್ದು, ನೀರು ಸರಬರಾಜು ಇಂಜಿನಿಯರ್ ಜತೆ ಚರ್ಚಿಸಲಾಗಿದೆ. ಮೂರ‌್ನಾಲ್ಕು ದಿನಗಳಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳಿಸಿ ನೀರು ಪೂರೈಸುವುದಾಗಿ ತಿಳಿಸಿದ್ದಾರೆ.
ಕೆ.ಸಿ. ಕಡೂರ, ಪಿಡಿಒ
ಲಕ್ಷ್ಮೇಶ್ವರ: ಬೇಸಿಗೆ ಆರಂಭಕ್ಕೂ ಮುನ್ನವೇ ತಾಲೂಕಿನ ಆದ್ರಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಪೈಪ್‌ಲೈನ್ ದುರಸ್ತಿ ನೆಪದಲ್ಲಿ ಒಂದು ತಿಂಗಳಿಂದ ನೀರು ಸರಬರಾಜು ಸ್ಥಗಿತಗೊಂಡಿದ್ದು, ಜನರು ನೀರಿಗಾಗಿ ಹೊರ ವಲಯದ ತೋಟ, ಬೋರ್‌ವೆಲ್‌ಗಳಿಗೆ ಅಲೆಯುತ್ತಿದ್ದಾರೆ.
ಸುಮಾರು 5 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮಕ್ಕೆ ಹಲವಾರು ದಿನಗಳಿಂದ ನೀರು ಪೂರೈಕೆಯಾಗಿಲ್ಲ. ಸ್ಥಳೀಯ ಬೋರ್‌ವೆಲ್‌ಗಳಲ್ಲಿಯೂ ನೀರು ಲಭ್ಯವಿಲ್ಲದ ಕಾರಣ ದೂರದ ಪ್ರದೇಶಗಳಿಗೆ ತೆರಳಿ ನೀರು ತರುವ ಅನಿವಾರ್ಯತೆ ಎದುರಾಗಿದೆ. ತಳ್ಳುಗಾಡಿಗಳಲ್ಲಿ ಕೊಡ, ಕ್ಯಾನ್‌ಗಳನ್ನು ತುಂಬಿಕೊಂಡು ನೀರು ಸಾಗಿಸುವ ದೃಶ್ಯ ಸಾಮಾನ್ಯವಾಗಿದೆ. ಕುಡಿಯಲು ಹಾಗೂ ನಿತ್ಯದ ಬಳಕೆಗೆ ಅಗತ್ಯವಿರುವ ನೀರು ಹೊಂದಿಸಿಕೊಳ್ಳಲು ಮಹಿಳೆಯರು, ವೃದ್ಧರು ಸೇರಿದಂತೆ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ನಳಗಳಿವೆ, ನೀರಿಲ್ಲ
ಗ್ರಾಮದಲ್ಲಿ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಮನೆಮನೆಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಸಮರ್ಪಕ ನೀರು ಸಂಗ್ರಹ ಮತ್ತು ಪೂರೈಕೆ ವ್ಯವಸ್ಥೆ ಇಲ್ಲದಿರುವುದರಿಂದ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ನಳ ಸಂಪರ್ಕವಿದ್ದರೂ ನೀರು ಬಾರದಿರುವುದು ಯೋಜನೆಯ ಆಶಯವನ್ನೇ ಪ್ರಶ್ನಿಸುವಂತಾಗಿದೆ.
ಒಂದು ತಿಂಗಳಿಂದ ನೀರಿಲ್ಲದ್ದರಿಂದ ಆತಂಕ ಮೂಡಿದೆ. ಸದ್ಯದ ಪೈಪ್‌ಲೈನ್ ದುರಸ್ತಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಿ ನೀರು ಪೂರೈಸುವುದರ ಜತೆಗೆ, ಸಮಸ್ಯೆ ಮರುಕಳಿಸದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಅಲ್ಲಿಯವರೆಗೆ ಪರ್ಯಾಯವಾಗಿ ಟ್ಯಾಂಕರ್ ಮೂಲಕವಾದರೂ ಕುಡಿಯುವ ನೀರು ಪೂರೈಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.