ಲಿಂ.ವೀರಗಂಗಾಧರ ಜಗದ್ಗುರುಗಳ ಹೆಸರಿನಲ್ಲಿ ಡಿಕೆಶಿ ಪ್ರಮಾಣವಚನ
ಲಿಂ.ಜಗದ್ಗುರುಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ
ಲಕ್ಷ್ಮೇಶ್ವರ: ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾಗಿ ಲಿಂ.ವೀರಗಂಗಾಧರ ಜಗದ್ಗುರುಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ತಪೋಭೂಮಿ ಮುಕ್ತಿಮಂದಿರ Mukti Mandir ಧರ್ಮಕ್ಷೇತ್ರದಲ್ಲಿ ಲಿಂ.ಜಗದ್ಗುರುಗಳ ಕರ್ತೃ ಗದ್ದುಗೆಗೆ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ ಮತ್ತು ರಾಮಣ್ಣ ಲಮಾಣಿ, ರಾಜ್ಯದ ಮುಖ್ಯಮಂತ್ರಿ ಹುದ್ದೆ ಡಿ.ಕೆ. ಶಿವಕುಮಾರ ಅವರಿಗೆ ದೊರಕಿದ್ದು ಹೆಮ್ಮೆಯ ಸಂಗತಿ. ಡಿಕೆಶಿ ಅವರು ದೇವರು, ಧರ್ಮದ ಮೇಲೆ ಅಪಾರ ನಂಬಿಕೆ ಹೊಂದಿದ್ದಾರೆ. ಅದರಲ್ಲೂ ನಡೆದಾಡುವ ದೇವರೆಂದು ಪ್ರತೀತಿಯಾಗಿದ್ದ ರಂಭಾಪುರಿ ಜಗದ್ಗುರು, ಮುಕ್ತಿಮಂದಿರ ಧರ್ಮಕ್ಷೇತ್ರದ ಕರ್ತೃ ಲಿಂ.ಜ.ವೀರಗಂಗಾಧರ ಶಿವಾಚಾರ್ಯ ಭಗವತ್ಪಾದಂಗಳವರ ಮೇಲೆ ಅಚಲ ನಂಬಿಕೆ, ವಿಶ್ವಾಸ ಹೊಂದಿದ್ದಾರೆ. ಲಿಂ.ಜಗದ್ಗುರುಗಳ ಆಶೀರ್ವಾದದ ಫಲವಾಗಿ ಮುಖ್ಯಮಂತ್ರಿಯಾಗಿದ್ದಾರೆ ಎಂದರು.
ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಡಿಕೆಶಿ ಅವರು ಇತ್ತೀಚೆಗೆ ಭೇಟಿ ನೀಡಿ, ಈಗಿನ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಿದ್ದರು. ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲೂ ಲಿಂ. ಗಂಗಾಧರ ಜಗದ್ಗುರುಗಳ(ಅಜ್ಜಯ್ಯ)ಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿಯೇ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಲಿಂ.ಜಗದ್ಗುರುಗಳ ಆಶೀರ್ವಾದ ಅವರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸಿದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಿ.ಆರ್. ಕೊಪ್ಪದ, ನಗರ ಅಧ್ಯಕ್ಷ ಅಮರೇಶ ತೆಂಬದಮನಿ, ಜಯಕ್ಕ ಕಳ್ಳಿ, ಶರಣು ಗೋಡಿ, ಮುತ್ತಣ್ಣ ಗಡೆಪ್ಪನವರ, ಸುಭಾಸ ಓದುನವರ, ಸೋಮನಗೌಡ್ರ ಪಾಟೀಲ(ಎಲಿಬಳ್ಳಿ), ಬಸವರಾಜ ಓದುನವರ, ಪರಮೇಶ ಲಮಾಣಿ, ಸೋಮನಗೌಡ್ರ ಪಾಟೀಲ, ನೂರಾರು ಕಾರ್ಯಕರ್ತರು ಹಾಜರಿದ್ದರು.