ನರಗುಂದ: ಕೆರೆ ಹೂಳೆತ್ತುವಾಗ ಜೆಸಿಬಿ ಯಂತ್ರದಡಿ ಸಿಲುಕಿ ಗಾಯಗೊಂಡಿದ್ದ (SNAKE INJURED) ಹಾವಿಗೆ ಪಟ್ಟಣದ ಬಾಬಾಸಾಹೇಬ ಭಾವೆ ಸಾರ್ವಜನಿಕ ತಾಲೂಕಾಸ್ಪತ್ರೆಯಲ್ಲಿ ಉರಗ ರಕ್ಷಕರೊಬ್ಬರು ಚಿಕಿತ್ಸೆ ಕೊಡಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಪಟ್ಟಣದ ಕಸಬಾ ವಿವೇಕಾನಂದ ನಗರದ ಬಡಾವಣೆಯ ಸಮೀಪದ ಜಮೀನಿನಲ್ಲಿ ಗುರುವಾರ ರಾತ್ರಿ ಜೆಸಿಬಿ ಮೂಲಕ ಬದುವು ಹಾಗೂ ಕೆರೆ ಹೂಳೆತ್ತುವ ಕೆಲಸ ಮಾಡಲಾಗುತ್ತಿತ್ತು. ಈ ವೇಳೆ ಜೆಸಿಬಿಯ ಬಕೆಟ್‌ಗೆ ಸಿಲುಕಿದ ಕೆರೆ ಹಾವು ಗಂಭೀರವಾಗಿ ಗಾಯಗೊಂಡಿತ್ತು. ಜೆಸಿಬಿ ಚಾಲಕ ಎಷ್ಟೇ ಪ್ರಯತ್ನಿಸಿದರೂ ಹಾವು ಒಂದಿಂಚೂ ಕದಲದೇ ಸ್ಥಳದಲ್ಲಿಯೇ ನಿಂತಿತ್ತು. ಇದರಿಂದ ಗಾಬರಿಗೊಂಡ ಚಾಲಕ ಉರಗ ರಕ್ಷಕ ಬಿ.ಆರ್. ಸುರೇಬಾನ ಅವರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಅವರು ಸ್ಥಳಕ್ಕೆ ಬಂದು ಸುರಕ್ಷಿತವಾಗಿ ಸೆರೆ ಹಿಡಿದು ಆಸ್ಪತ್ರೆಗೆ ತಂದಾಗ ಕರ್ತವ್ಯದಲ್ಲಿದ್ದ ವೈದ್ಯರು ‘ಇಲ್ಲಿಗೇಕೆ ತಂದಿದ್ದೀರಿ’ ಎಂದು ಪ್ರಶ್ನಿಸಿ ಚಿಕಿತ್ಸೆಗೆ ಹಿಂದೇಟು ಹಾಕಿದರು. ಮನವೊಲಿಸಿದ ಬಳಿಕ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿ ಹಾವಿಗೆ ಪ್ರಥಮ ಚಿಕಿತ್ಸೆ ನೀಡಿದರು. ನಂತರ ಅರಣ್ಯಕ್ಕೆ ಬಿಡಲಾಯಿತು. ಪಾರ್ವತಿ ಬಿರಾದಾರ, ಬಿ.ವೈ. ಗೊರವರ, ಮುತ್ತಪ್ಪ ಎಂ., ಮೌಲಾಸಾಬ್ ಠಾಣೇದ ಹಾವಿನ ಆರೈಕೆಗೆ ಶ್ರಮಿಸಿದರು.