SIR process: ಎಸ್‌ಐಆರ್‌ಗೆ ಬಸವಳಿದ ಜನ!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಉದಯಕುಮಾರ ಹಣಗಿ ಶಿರಹಟ್ಟಿ
ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಶಿರಹಟ್ಟಿ ತಾಲೂಕು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನಸಾಮಾನ್ಯರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ಕೂಲಿ ಬಿಟ್ಟು 2002ರ ಅವಧಿಯ ಮತಪಟ್ಟಿಯ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆ, ಇನ್ನಿತರ ಸಮಸ್ಯೆಗಳಿಂದ ಜನರು ಬಸವಳಿದಿದ್ದಾರೆ.
ಕೆಲವೇ ಕೆಲವು ನಕಲಿ ಮತದಾರರನ್ನು ಪತ್ತೆಹಚ್ಚುವ ನೆಪದಲ್ಲಿ, ಗ್ರಾಮೀಣ ಭಾಗದ ಮುಗ್ಧ ಹಾಗೂ ಅನಕ್ಷರಸ್ಥ ಮತದಾರರನ್ನು ಇಂತಹ ಜಟಿಲ ಪ್ರಕ್ರಿಯೆಗೆ ಒಳಪಡಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಉದ್ಯೋಗ ಹಾಗೂ ಕೃಷಿ ಹಿನ್ನೆಲೆಯಲ್ಲಿ ಪದೇಪದೆ ಮನೆ ಬದಲಾಯಿಸಿದ ಶಿರಹಟ್ಟಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹಳೆಯ ವಿಳಾಸದ ದಾಖಲೆಗಳನ್ನು ಹೆಕ್ಕಿ ತೆಗೆಯುವುದು ಹರಸಾಹಸವಾಗಿ ಪರಿಣಮಿಸಿದೆ. ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಬಿಎಲ್‌ಒಗಳು ಮನೆ ಮನೆಗೆ ತೆರಳಿ ನಮೂನೆಗಳನ್ನು ನೀಡುತ್ತಿದ್ದಾರಾದರೂ, ಅದನ್ನು ಹೇಗೆ ಭರ್ತಿ ಮಾಡಬೇಕೆಂಬ ಸರಿಯಾದ ಮಾರ್ಗದರ್ಶನ ನೀಡುತ್ತಿಲ್ಲ. ತರಬೇತಿಯ ಕೊರತೆಯಿಂದಾಗಿ ಸ್ವತಃ ಕೆಲವು ಬಿಎಲ್‌ಒಗಳಿಗೇ ಗೊಂದಲವಿದ್ದು, ಜನಸಾಮಾನ್ಯರು ಕೇಳುವ ಪ್ರಶ್ನೆಗಳಿಗೆ ನೀವು ಕೊಟ್ಟ ಮಾಹಿತಿಯನ್ನಷ್ಟೇ ನಾವು ಮೇಲಧಿಕಾರಿಗಳಿಗೆ ತಲುಪಿಸುತ್ತೇವೆ ಎಂದು ಕೈತೊಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಎಸ್‌ಐಆರ್ ಪ್ರಕ್ರಿಯೆಯಿಂದ ಜನರು ಬೇಸರಗೊಂಡಿದ್ದಾರೆ.
ಪ್ರತಿ ಅರ್ಜಿಯೊಂದಿಗೆ ಎರಡು ಹೊಸ ಪಾಸ್‌ಪೋರ್ಟ್ ಅಳತೆಯ ಫೋಟೋ ಕಡ್ಡಾಯವಾಗಿ ಲಗತ್ತಿಸಬೇಕಾಗಿದೆ. ತಾಲೂಕಿನ ಬಡ ಹಾಗೂ ರೈತಾಪಿ ಕುಟುಂಬಗಳಿಗೆ ಇದು ಅನಗತ್ಯ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಇಂಟರ್ನೆಟ್ ಸೌಲಭ್ಯವಿಲ್ಲದ ಹಳ್ಳಿಗಳ ಜನ ಸೈಬರ್ ಕೇಂದ್ರಗಳಿಗೆ ಅಲೆಯುವಂತಾಗಿದೆ.
ಡಿಜಿಟಲ್ ತಂತ್ರಜ್ಞಾನದ ಅರಿವಿಲ್ಲದ ವೃದ್ಧರು ಹಾಗೂ ಅನಕ್ಷರಸ್ಥರಿಗೆ ನೆರವಾಗಲು ಯಾವುದೇ ಸ್ವಯಂಸೇವಾ ಸಂಸ್ಥೆಗಳೂ ಮುಂದೆ ಬರುತ್ತಿಲ್ಲ. ಸ್ಥಳೀಯವಾಗಿ ಎಸ್‌ಐಆರ್ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸದಿದ್ದರೆ, ಶಿರಹಟ್ಟಿ ತಾಲೂಕಿನ ಸಹಸ್ರಾರು ನೈಜ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವುದು ಖಚಿತ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
"

ರಾಜಕೀಯ ಪಕ್ಷಗಳ ನಾಯಕರುಗಳು ಕೇವಲ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ನಿರತರಾಗಿದ್ದಾರೆಯೇ ಹೊರತು, ಹಳ್ಳಿಗಳ ಜನರಿಗೆ ಸಹಾಯ ಮಾಡಲು ಮುಂದಾಗುತ್ತಿಲ್ಲ. ಶಿರಹಟ್ಟಿ ತಾಲೂಕಿನ ಯಾವುದೇ ಭಾಗದಲ್ಲೂ ರಾಜಕೀಯ ಪಕ್ಷಗಳಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಮತದಾರರ ನೆರವಿಗಾಗಿ ಕನಿಷ್ಠ ಒಂದು ‘ಸಹಾಯ ಕೇಂದ್ರ’ ತೆರೆಯುವ ಜವಾಬ್ದಾರಿ ತೋರಿಲ್ಲ.

— ಸ್ಥಳೀಯ ಸಾರ್ವಜನಿಕರು, ಶಿರಹಟ್ಟಿ

ಗ್ರಾಮೀಣ ಭಾಗದಲ್ಲಿ ಈ ತರಹದ ಸಮಸ್ಯೆ ಕಾಣಿಸಿಕೊಂಡಿವೆ. ಅದರಿಂದ ಪತ್ರಿ ಗ್ರಾಮ ಪಂಚಾಯಿತಿಯಲ್ಲಿ ತರಬೇತಿದಾರರನ್ನು ಗುರುತಿಸಲಾಗಿದೆ. ಜನರು ಇವರನ್ನು ಭೇಟಿ ಮಾಡಿದರೆ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ.

— ಸಂತೋಷ ಆಸ್ಕಿ, ಚುನಾವಣೆ ಶಿರಸ್ತೇದಾರ ಶಿರಹಟ್ಟಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net