APMC ದುರ್ನಾತ ಬೀರುತ್ತಿದೆ ಶಿರಹಟ್ಟಿ ಎಪಿಎಂಸಿ

ಶಿರಹಟ್ಟಿಯ ಕೃಷಿ ಉತ್ಪನ್ನ ಉಪ-ಮಾರುಕಟ್ಟೆಯಲ್ಲಿ ಕಸದ ರಾಶಿ ಬಿದ್ದಿರುವುದು.
ಶಿರಹಟ್ಟಿಯ ಕೃಷಿ ಉತ್ಪನ್ನ ಉಪ-ಮಾರುಕಟ್ಟೆಯಲ್ಲಿ ಕಸದ ರಾಶಿ ಬಿದ್ದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ದಶಕಗಳಿಂದ ಇಲ್ಲ ವ್ಯಾಪಾರ-ವಹಿವಾಟು
  • ಕಸದ ರಾಶಿ ಕೊಳೆತು ರೋಗ ರುಜಿನದ ಭೀತಿ
ಉದಯಕುಮಾರ ಹಣಗಿ ಶಿರಹಟ್ಟಿ
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ದಶಕಗಳಿಂದ ವ್ಯಾಪಾರ-ವಹಿವಾಟು ಇಲ್ಲದೆ ಕೃಷಿಕರಿಗೆ ವರದಾನವಾಗುವ ಬದಲು ದುರ್ನಾತದ ಕೇಂದ್ರವಾಗಿ ರೂಪುಗೊಂಡಿದೆ.
ಮೂರು ದಶಕಗಳ ಹಿಂದೆ ಅಂದಾಜು 12 ಎಕರೆಗೂ ಹೆಚ್ಚು ಜಮೀನನ್ನು ಖರೀದಿಸಿತ್ತು. ಈಗ ಅದರ ಮೌಲ್ಯ ಕೋಟಿ ದಾಟಿದೆ. ಆದರೆ, ಈ ವಿಶಾಲ ಜಾಗದಲ್ಲಿ ಕಸ-ಕಡ್ಡಿ, ಮುಳ್ಳು ಕಂಟಿ ಬೆಳೆದು ನಿಂತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
ಪಕ್ಕದಲ್ಲೇ ಇರುವ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ನೆಮ್ಮದಿಯಾಗಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ದುರ್ನಾತದ ಕಿರಿಕಿರಿಯಿಂದಾಗಿ ಮೂಗು ಮುಚ್ಚಿಕೊಂಡೇ ಬಸ್‌ಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.  
ಮಾರುಕಟ್ಟೆಯ ಆವರಣವು ಈಗ ನಿತ್ಯ ಕರ್ಮದ ತಾಣ ಹಾಗೂ ಸತ್ತ ಪ್ರಾಣಿಗಳನ್ನು ಎಸೆಯುವ ಡಂಪಿಂಗ್ ಯಾರ್ಡ್ ಆಗಿದೆ. ಇತ್ತೀಚೆಗೆ ಸುರಿದ ಸಣ್ಣ ಮಳೆಗೆ ಕಸದ ರಾಶಿ ಕೊಳೆತು ರೋಗ ರುಜಿನಗಳಿಗೆ ಕಾರಣವಾಗಿದೆ.
ಮಾನಸಿಕ ಕಿರಿಕಿರಿ: ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಸೌಂದರ್ಯ ನೋಡಬೇಕಾದ ಕಣ್ಣುಗಳಿಗೆ ಕಸದ ರಾಶಿ ರಾಚುತ್ತಿದ್ದು, ದುರ್ನಾತ ಸೂಸುತ್ತಿದೆ. ಇದರಿಂದಾಗಿ ಸದಾ ತಲೆನೋವು, ವಾಕರಿಕೆ ಮತ್ತು ಉಸಿರಾಟದ ತೊಂದರೆಗಳು ಸ್ಥಳೀಯರನ್ನು ಬಾಧಿಸುತ್ತಿವೆ. ಎಪಿಎಂಸಿ ಜಾಗದ ಪಕ್ಕದಲ್ಲೇ ಹತ್ತಕ್ಕೂ ಹೆಚ್ಚು ಗೂಡಂಗಡಿಗಳು, ಹೋಟೆಲ್‌ಗಳಿವೆ. ಇಲ್ಲಿ ಎಗ್‌ರೈಸ್, ಮಿರ್ಚಿ-ಬಜಿ ಸವಿಯಲು ಬೆಳಗ್ಗೆ, ಸಂಜೆ ಜನ ಮುಗಿಬೀಳುತ್ತಾರೆ. ಆದರೆ, ಪಕ್ಕದ ಕಸದ ರಾಶಿಯಿಂದ ಬರುವ ನೊಣಗಳು, ಸೊಳ್ಳೆಗಳು ಈ ಆಹಾರದ ಮೇಲೆ ಕೂಡುತ್ತವೆ. ಎಪಿಎಂಸಿಯಲ್ಲಿನ ದುರ್ನಾತ ಹಾಗೂ ಇಲ್ಲಿನ ಅವ್ಯವಸ್ಥೆ ವಿರುದ್ಧ ಸ್ಥಳೀಯ ನಿವಾಸಿಗಳು ಅಧಿಕಾರಿಗಳು ಹಾಗೂ ಇಲ್ಲಿನ ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. 

ಮುಂದಿನ ದಿನಗಳಲ್ಲಿ ಶಿರಹಟ್ಟಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಉಪ- ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು.

— ಅಜಯ್ ಹಳೇಮನಿ ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಲಕ್ಷ್ಮೇಶ್ವರ

ಶಾಸಕರು ಸ್ವಚ್ಛತೆ ಮತ್ತು ಮಾರುಕಟ್ಟೆ ಸಲುವಾಗಿ ಸಾಕಷ್ಟು ಪ್ರಯತ್ನ ಮಾಡುತ್ತ ಬಂದಿದ್ದಾರೆ. ಸಾರ್ವಜನಿಕರು ಮಾರುಕಟ್ಟೆಯ ಉಪಯೋಗ ಮಾಡಿಕೊಳ್ಳಲು ಮುಂದೆ ಬಂದರೆ ಸಹಕಾರ ನೀಡುತ್ತೇವೆ.

— ಫಕೀರೇಶ ರಟ್ಟಿಹಳ್ಳಿ ಪಪಂ ಮಾಜಿ ಸದಸ್ಯ ಶಿರಹಟ್ಟಿ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net