ನರಗುಂದ: ಪಟ್ಟಣದ 23 ವಾರ್ಡ್‌ಗಳಲ್ಲಿ ಸ್ವಂತ ನಿವೇಶನ, ಮನೆ ಇಲ್ಲದವರಿಗಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 500 ಸುಸಜ್ಜಿತ ಮನೆ shelter homes ನಿರ್ಮಿಸಲಾಗಿದ್ದು, ಸಂಕ್ರಾಂತಿಫಲಾನುಭವಿಗಳಿಗೆ ಮನೆಗಳ ಹಸ್ತಾಂತರ ಪ್ರಕ್ರಿಯೆ ನಡೆಸಲಾಗುವುದು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಗುಡ್ಡದ ಇಳಿಜಾರು ಪ್ರದೇಶದಲ್ಲಿ ಕೊಳಚೆ ನಿರ್ಮೂಲನೆ ಮಂಡಳಿಯಿಂದ ನಿರ್ಮಿಸಿರುವ 292 ಮನೆಗಳನ್ನು ಬುಧವಾರ ಪರಿಶೀಲಿಸಿ ಮಾತನಾಡಿದ ಅವರು, ‘ಹಿಂದಿನ ಪುರಸಭೆ ಚುನಾವಣೆ ಸಂದರ್ಭದಲ್ಲಿ ಪಟ್ಟಣದ ಎಲ್ಲ ಬಡಾವಣೆಗಳಲ್ಲಿರುವ ಕಡು ಬಡವರಿಗೆ ಉಚಿತ ನಿವೇಶನ, ಮನೆಗಳ ನಿರ್ಮಿಸಿಕೊಡುವ ಭರವಸೆ ನೀಡಲಾಗಿತ್ತು.
ಕೊಟ್ಟ ಮಾತಿನಂತೆ 13 ಎಕರೆ ಪ್ರದೇಶದಲ್ಲಿ 500 ನಿವೇಶನ ಸಹಿತ ಮನೆಗಳನ್ನು 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಮೊದಲ ಹಂತವಾಗಿ ಈಗಾಗಲೇ 292 ಮನೆಗಳು ಪೂರ್ಣಗೊಂಡಿವೆ. ಅವುಗಳನ್ನು ಎಲ್ಲ ರೀತಿಯ ಮೂಲ ಸೌಕರ್ಯಗಳೊಂದಿಗೆ ಅರ್ಹ ಫಲಾನುಭವಿಗಳಿಗೆ ಮಕರ ಸಂಕ್ರಾಂತಿ ಹಬ್ಬದ ಬಳಿಕ ವಿತರಣೆ ಮಾಡಲಾಗುವುದು ಎಂದರು.
500 ಮನೆಗಳ ಪೈಕಿ 208 ಮನೆಗಳ ಕಾಮಗಾರಿ ನಿರ್ಮಾಣ ಹಂತದಲ್ಲಿವೆ. 90 ಮನೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಇನ್ನೂ ಅನುಮತಿ ದೊರೆತಿಲ್ಲ. ಸರ್ವ ಜನಾಂಗದ ಬಡವರ ಹಿತದೃಷ್ಟಿಯಿಂದ ಎಲ್ಲ ಮನೆಗಳ ನಿರ್ಮಾಣಕ್ಕೆ ತಕ್ಷಣ ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.
ಪಟ್ಟಣದ ಗುಡ್ಡದ ಬಳಿಯಿರುವ ಜನತಾ ಪ್ಲಾಟ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ 500 ಮನೆಗಳನ್ನು ಕೇಂದ್ರ ಸರ್ಕಾರದ 1.50 ಲಕ್ಷ, ರಾಜ್ಯ ಸರ್ಕಾರದ 2 ಲಕ್ಷ, ಫಲಾನುಭವಿಗಳಿಂದ 1 ಲಕ್ಷ ಹಾಗೂ ರಾಜ್ಯ ಸರ್ಕಾರದ ಹೆಚ್ಚುವರಿ 2 ಲಕ್ಷ ಸೇರಿ ಒಟ್ಟು 6.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ನೂತನ ಬಡಾವಣೆಗೆ ಜಗನ್ನಾಥರಾವ್ ಅವರ ಹೆಸರು ನಾಮಕರಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಳಚೆ ನಿರ್ಮೂಲನೆ ಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಗುತ್ತಿಗೆದಾರ ನಾಗರಾಜ ಎಂ., ಪ್ರಕಾಶ ಪಟ್ಟಣಶೆಟ್ಟಿ, ಹನುಮಂತ ಹವಾಲ್ದಾರ, ಬಿ.ಕೆ. ಗುಜಮಾಗಡಿ, ಚಂದ್ರಗೌಡ ಪಾಟೀಲ, ಅನಿಲ ಧರಿಯಣ್ಣವರ, ಬಸು ಪಾಟೀಲ,ಇತರರಿದ್ದರು.