COW: ಗೋವುಗಳ ಸೇವೆಯೇ ಭಗವಂತನ ಪೂಜೆ

ಮನೆ ಮುಂದೆ ಬರುವ ಹಸುಗಳಿಗೆ ಆಹಾರ, ನೀರು ನೀಡಿ ಉಪಚರಿಸುವ ಲಕ್ಷ್ಮೇಶ್ವರ ಬಾಳೆಹಳ್ಳಿಮಠ ಕುಟುಂಬದವರು.
ಮನೆ ಮುಂದೆ ಬರುವ ಹಸುಗಳಿಗೆ ಆಹಾರ, ನೀರು ನೀಡಿ ಉಪಚರಿಸುವ ಲಕ್ಷ್ಮೇಶ್ವರ ಬಾಳೆಹಳ್ಳಿಮಠ ಕುಟುಂಬದವರು.
Published on

ಪ್ರಮುಖ ಮುಖ್ಯಾಂಶಗಳು

  • ಮನೆ ಮುಂದೆ ಬರುವ ಬೀದಿಹಸುಗಳಿಗೆ ಆಹಾರ ನೀಡಿ ಆರೈಕೆ
  • ಲಕ್ಷ್ಮೇಶ್ವರದಲ್ಲೊಂದು ವಿಶಿಷ್ಟ ಕುಟುಂಬ
  • ಮೂರು ದಶಕಗಳಿಂದ ನಿತ್ಯವೂ ಸೇವೆ
ಮಲ್ಲು ಕಳಸಾಪುರ, ಲಕ್ಷ್ಮೇಶ್ವರ
ಸೂರ್ಯೋದಯವಾಗುವ ಮುನ್ನವೇ ಪಟ್ಟಣದ ಮನೆಯೊಂದರ ಮುಂದೆ ಹತ್ತಾರು ಹಸುಗಳು (COW) ಬಂದು ಮೌನವಾಗಿ ನಿಲ್ಲುತ್ತವೆ. ಗೋಸೇವೆಗಾಗಿ ಮಿಡಿಯುವ ಮನಸುಗಳು ಮನೆಯಿಂದ ಹೊರಬಂದು ಆಹಾರ ನೀಡಿ ಮೈ ಸವರಿ ಸೇವೆ ಸಲ್ಲಿಸುತ್ತಾರೆ! ಪಟ್ಟಣದ ಕುಟುಂಬವೊಂದರ ಮಾದರಿ ಸೇವೆ ಗೋಪ್ರೇಮಿಗಳ ಮನಸೂರೆಗೊಂಡಿದೆ.
ಪಟ್ಟಣದಲ್ಲಿ ವಾಸ ಮಾಡುವ ಬಾಳೇಹಳ್ಳಿಮಠ ಕುಟುಂಬಕ್ಕೆ ಹಾಗೂ ಗೋವುಗಳಿಗೆ ಅವಿನಾಭಾವ ನಂಟು. ಬೆಳ್ಳಂ ಬೆಳಗ್ಗೆ ಮನೆ ಮುಂದೆ ಬಂದು ಆಶೀರ್ವದಿಸುವ ಹಸುಗಳಿಗೆ ಆಹಾರ ನೀಡಿ ಸಾರ್ಥಕಭಾವದಿಂದಲೇ ಸೇವೆ ಸಲ್ಲಿಸುವುದು ಈ ಮನೆತನದ ಕಾಯಕವಾಗಿದೆ. ಸುಮಾರು ಮೂರು ದಶಕಗಳಿಂದ ಈ ಕುಟುಂಬ ನಿತ್ಯವೂ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ತಪ್ಪದೇ ಬೀದಿ ಹಸುಗಳಿಗೆ ಆಹಾರ, ನೀರು ನೀಡಿ ಆರೈಕೆ ಮಾಡುತ್ತದೆ. ಅಗತ್ಯವಿದ್ದಾಗ ಚಿಕಿತ್ಸೆಯ ವ್ಯವಸ್ಥೆ ಕೂಡ ಮಾಡುತ್ತಿದೆ. ಗೋ ಸೇವೆಯನ್ನೇ ದೇವರ ಸೇವೆ ಎಂದು ನಂಬಿ ಬದುಕುತ್ತಿರುವ ಈ ಕುಟುಂಬದ ಕಾರ್ಯ ಮಾದರಿಯಾಗಿದೆ.
ಮನೆಯೊಳಗೆ ಹಸುಗಳಿಗಾಗಿ ಅವಲಕ್ಕಿ ತೌಡು, ಗೋಧಿ ತೌಡು, ಜೋಳದ ನುಚ್ಚು, ಅಕ್ಕಿ, ಬೇಳೆ, ಬೆಲ್ಲ ಸೇರಿದಂತೆ ವಿವಿಧ ಧಾನ್ಯಗಳನ್ನು ಸಂಗ್ರಹಿಸಲಾಗುತ್ತದೆ. ಮೂರು ಹೊತ್ತು ಪ್ರತ್ಯೇಕ ಬುಟ್ಟಿಗಳಲ್ಲಿ ಆಹಾರ ಹಾಕಿ ತಿನ್ನಿಸುತ್ತಾರೆ. ಬಳಿಕ ನೀರು ಕುಡಿಸಿ ಹಸುಗಳ ಮೈ ಸವರಿ ಸೇವೆ ಮಾಡುತ್ತಾರೆ.
ಈ ಕುಟುಂಬದ ಹಿರಿಯರಾದ ದಿವಂಗತ ಸೋಮಶೇಖರಯ್ಯ ಬಾಳೇಹಳ್ಳಿಮಠ ಅವರಿಂದ ಆರಂಭವಾದ ಗೋಸೇವೆಯ ಪರಂಪರೆಯನ್ನು ಅವರ ಮಕ್ಕಳಾದ ವಿಶ್ವನಾಥ ಬಾಳೇಹಳ್ಳಿಮಠ ಹಾಗೂ ಅವರ ಸಹೋದರರು ಅದೇ ಭಕ್ತಿ, ಪ್ರೀತಿ ಮತ್ತು ನಿಷ್ಠೆಯಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಗೋಸೇವೆ ನಮ್ಮ ಬದುಕಿನ ಧರ್ಮ ಎಂಬುದು ಅವರ ನಂಬಿಕೆ.
ಈ ಕುಟುಂಬದವರ ಸೇವೆ ಮನಸೋತ ಪಟ್ಟಣದ ಕಿರಾಣಿ ವ್ಯಾಪಾರಿಗಳು, ಗೋಪ್ರೇಮಿಗಳು ಹಾಗೂ ದಾನಿಗಳು ತಮ್ಮ ಕೈಲಾದಷ್ಟು ದವಸ-ಧಾನ್ಯಗಳನ್ನು ಇವರ ಮನೆಗೆ ತಂದು ಕೊಡುತ್ತಾರೆ. ಹೀಗಾಗಿ ಈ ಪುಣ್ಯದ ಕಾರ್ಯದಲ್ಲಿ ಸಮಾಜವೂ ಪಾಲುದಾರನಾಗುತ್ತಿದೆ. ಮನೆಯ ಮುಂದೆ ಬರುವ ಬೀದಿ ಹಸು- ಕರುಗಳನ್ನು ಹೊಡೆದು ಓಡಿಸುವ ಮನಸ್ಥಿತಿ ಉಳ್ಳವರಿಗೆ ಈ ಸೇವೆ ಪ್ರೇರಣೆಯಾಗಿದೆ.
ಹಸುಗಳಷ್ಟೇ ಅಲ್ಲ, ಮನೆ ಮುಂದೆ ಬರುವ ಬೀದಿ ನಾಯಿಗಳಿಗೂ ಬಿಸ್ಕತ್ ಹಾಗೂ ಆಹಾರ ನೀಡಿ ಹಸಿವು ನೀಗಿಸುತ್ತಾರೆ. ಹಸುಗಳು ಮನೆಯ ಮುಂದೆ ಹಾಕುವ ಸಗಣಿ ಮತ್ತು ಗೋ ಮೂತ್ರವನ್ನು ತೆಗೆದು ಸ್ವಚ್ಛಗೊಳಿಸುವುದು ಪುಣ್ಯದ ಕೆಲಸವೆಂದು ಬಾಳೆಹಳ್ಳಿಮಠ ಕುಟುಂಬದವರು ಪರಿಗಣಿಸುತ್ತಾರೆ.
ಒಂದು ಕಾಲದಲ್ಲಿ ಲಕ್ಷ್ಮೇಶ್ವರದಲ್ಲಿ ಮೂವತ್ತಕ್ಕೂ ಹೆಚ್ಚು ಬಸವಿ ದನಗಳು ಇವರ ಮನೆ ಬಾಗಿಲಿಗೆ ಬರುತ್ತಿದ್ದವಂತೆ.. ಪ್ರತಿಯೊಂದು ಹಸುವಿಗೂ ಪ್ರತ್ಯೇಕ ಬುಟ್ಟಿಯಲ್ಲಿ ಆಹಾರ ನೀಡಲಾಗುತ್ತಿತ್ತು. ಆದರೆ ಇಂದು ಆ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಗೋ ಕಳ್ಳತನ ಸೇರಿದಂತೆ ಹಲವು ಕಾರಣಗಳಿಂದ ಬೀದಿ ಹಸುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಕುಟುಂಬದವರ, ಗೋ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.

ನಿತ್ಯ ಮೂರು ಹೊತ್ತು ಮಾಡುವ ಈ ಗೋ ಸೇವೆಯನ್ನೇ ನಾವು ದೇವರ ಪೂಜೆ ಎಂದು ಭಾವಿಸಿದ್ದೇವೆ. ಆತ್ಮತೃಪ್ತಿ, ನೆಮ್ಮದಿ ಮತ್ತು ದೇವರ ಕೃಪೆ ದೊರೆಯುತ್ತದೆ. ಅದಕ್ಕಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ, ಹಸುವನ್ನು ಗೋಮಾತೆ, ಭೂಮಿ ತಾಯಿಗೆ ಸಮಾನ ಎಂತಲೂ ಮತ್ತು ಸಕಲ ದೇವತೆಗಳ ಆವಾಸ ಸ್ಥಾನ, ಕಾಮಧೇನು ಕಲ್ಪವೃಕ್ಷವೇ ಆಗಿದೆ. ಈ ಸೇವೆಯಿಂದ ನಮಗೆ ಒಳ್ಳೇಯದೇ ಆಗಿದೆ ನಿಸ್ವಾರ್ಥದಿಂದ ಸೇವೆ ಮಾಡುತ್ತಿದ್ದೇವೆ.

— ವಿಶ್ವನಾಥ ಬಾಳೇಹಳ್ಳಿಮಠ, ಗೋ ಸೇವಕರು

ಇಂದು ಮನುಷ್ಯ-ಮನುಷ್ಯರ ನಡುವೆಯೇ ಸಂಬಂಧಗಳು ದೂರವಾಗುತ್ತಿರುವ ಕಾಲದಲ್ಲಿ ಮೂಕ ಜೀವಿಗಳನ್ನು ಕುಟುಂಬದ ಸದಸ್ಯರಂತೆ ಕಾಣುವ ಬಾಳೇಹಳ್ಳಿಮಠ ಕುಟುಂಬದ ಸೇವೆ ನಿಜಕ್ಕೂ ಅನುಕರಣೀಯ. ಕರುಣೆ, ದಯೆ ಮತ್ತು ನಿಸ್ವಾರ್ಥ ಸೇವೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಕುಟುಂಬವೇ ಸಾಕ್ಷಿಯಾಗಿದೆ. ಇವರ ಗೋಸೇವೆ ಲಕ್ಷ್ಮೇಶ್ವರದ ಹೆಮ್ಮೆಯಾಗಿದ್ದು, ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸುವ ಅಪರೂಪದ ಮಾದರಿ ಕಾರ್ಯವಾಗಿದೆ.

— ರಂಗಣ್ಣ ಬದಿ, ಗೋ ಪ್ರೇಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net