ನರೇಗಲ್ಲ ಸ್ಟೇಷನ್‌ಗೆ ದ್ವಿತೀಯ ಸ್ಥಾನ

ರಾಜ್ಯದ ಅತ್ಯುತ್ತಮ ಪೊಲೀಸ್ ಠಾಣೆಗಳ ಪಟ್ಟಿ ಪ್ರಕಟ ಜಿಲ್ಲಾವಾರು ಕಾರ್ಯಕ್ಷಮತೆ ವಿಭಾಗದಲ್ಲಿ ಗದಗ ಜಿಲ್ಲೆ ಪ್ರಥಮ ಸ್ಥಾನ
ನರೇಗಲ್ಲ ಸ್ಟೇಷನ್‌ಗೆ ದ್ವಿತೀಯ ಸ್ಥಾನ
ಐಶ್ವರ್ಯಾ ನಾಗರಾಳ, ಪಿಎಸ್‌ಐ ನರೇಗಲ್ಲ ಠಾಣೆ
Published on: 

ನರೇಗಲ್ಲ: ಆಧುನಿಕ ತಂತ್ರಜ್ಞಾನದ ಸದ್ಬಳಕೆ ಹಾಗೂ ಕಾನೂನು-ಸುವ್ಯವಸ್ಥೆ ಪಾಲನೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿದ ನರೇಗಲ್ಲ ಪೊಲೀಸ್ ಠಾಣೆಗೆ ರಾಜ್ಯಮಟ್ಟದಲ್ಲಿ ಮನ್ನಣೆ ದೊರೆತಿದೆ. ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ರಾಜ್ಯದ ಅತ್ಯುತ್ತಮ ಪೊಲೀಸ್ ಠಾಣೆಗಳ ಪಟ್ಟಿಯಲ್ಲಿ ಠಾಣೆಯು ದ್ವಿತೀಯ ಸ್ಥಾನ ಪಡೆದಿದೆ.

ಅಪರಾಧ ತಡೆ ಮತ್ತು ತ್ವರಿತ ತನಿಖೆ, ಕಳ್ಳತನ ಪ್ರಕರಣಗಳ ಪತ್ತೆ, ಕಾಲಮಿತಿಯೊಳಗೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಕೆ, ರೌಡಿಗಳ ಚಲನವಲನದ ಮೇಲೆ ಕಟ್ಟುನಿಟ್ಟಿನ ನಿಗಾ, ನ್ಯಾಯಾಲಯಕ್ಕೆ ನಿಖರ ದಾಖಲೆ ಸಲ್ಲಿಕೆ ಹಾಗೂ ಇಲಾಖೆಯ ಆ್ಯಪ್‌ನಲ್ಲಿ ದೈನಂದಿನ ಮಾಹಿತಿಗಳನ್ನು ಸಮರ್ಪಕವಾಗಿ ಅಪ್‌ಡೇಟ್ ಮಾಡುವುದು ಸೇರಿದಂತೆ ಹಲವು ಕಠಿಣ ಮಾನದಂಡಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗಿದೆ.

ಪೊಲೀಸ್ ಇಲಾಖೆಯು ಪ್ರಕಟಿಸಿರುವ ರಾಜ್ಯದ ಟಾಪ್ 10 ಅತ್ಯುತ್ತಮ ಠಾಣೆಗಳ ಪಟ್ಟಿಯಲ್ಲಿ ನರೇಗಲ್ಲ ಠಾಣೆಯು 65.98 ಅಂಕಗಳನ್ನು ಗಳಿಸುವ ಮೂಲಕ 2ನೇ ಸ್ಥಾನ ಪಡೆದುಕೊಂಡಿದೆ. ಇನ್ನು ಜಿಲ್ಲಾವಾರು ಕಾರ್ಯಕ್ಷಮತೆ ವಿಭಾಗದಲ್ಲಿ ಗದಗ ಜಿಲ್ಲೆ ಪ್ರಥಮ ಸ್ಥಾನ ಗಳಿಸಿ ಗಮನ ಸೆಳೆದಿದೆ.

ಪೊಲೀಸ್ ಇಲಾಖೆಯು ಇದೇ ಮೊದಲ ಬಾರಿಗೆ ಜಾರಿಗೆ ತಂದಿರುವ ಶ್ರೇಯಾಂಕ ಪದ್ಧತಿಯಲ್ಲಿ ನಮ್ಮ ಠಾಣೆಗೆ 2ನೇ ಸ್ಥಾನ ದೊರೆತಿರುವುದು ಹೆಮ್ಮೆಯ ವಿಚಾರ. ಇದಕ್ಕೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಠಾಣೆ ಸಿಬ್ಬಂದಿಯ ಕರ್ತವ್ಯನಿಷ್ಠೆ, ಗೃಹರಕ್ಷಕ ದಳ ಹಾಗೂ ಜನರ ಸಹಕಾರವೇ ಕಾರಣ. ಈ ಗೌರವವು ಸಂತಸ ತಂದಿರುವುದರ ಜತೆಗೆ ಸಾರ್ವಜನಿಕ ಸೇವೆಯಲ್ಲಿ ಜವಾಬ್ದಾರಿಯನ್ನೂ ಹೆಚ್ಚಿಸಿದೆ.

ಐಶ್ವರ್ಯಾ ನಾಗರಾಳ, ಪಿಎಸ್‌ಐ ನರೇಗಲ್ಲ ಠಾಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net