ರೋಣ ತಾಲೂಕು ಪಂಚಾಯಿತಿ ಆವರಣದಲ್ಲಿ ವಿಬಿಜಿ ರಾಮ್ ಜಿ ಜಾಬ್‌ಕಾರ್ಡ್ ಮೇಳದ ಕರಪತ್ರ ಬಿಡುಗಡೆ ಮಾಡಲಾಯಿತು. ತಾಪಂ ಇಒ ಚಂದ್ರಶೇಖರ ಕಂದಕೂರ, ಸಿ.ಎಸ್. ನೀಲಗುಂದ, ದೇವರಾಜ, ಆರ್.ಎಲ್. ನಾಯ್ಕರ್, ಮಂಜುನಾಥ ಶಿರಸಂಗಿ, ಇನ್ನಿತರರು ಇದ್ದರು.
ಗ್ರಾಮೀಣ ಪ್ರದೇಶದ ಪ್ರತಿಯೊಂದು ಅರ್ಹ ಕುಟುಂಬಕ್ಕೂ ಉದ್ಯೋಗಾವಕಾಶದ ಸೌಲಭ್ಯ ತಲುಪಿಸುವ ಉದ್ದೇಶದಿಂದ ರೋಣ ತಾಲೂಕು ಪಂಚಾಯಿತಿ ವ್ಯಾಪ್ತಿಯ 22 ಗ್ರಾಮ ಪಂಚಾಯಿತಿಗಳಲ್ಲಿ ಆಗಸ್ಟ್ 15ರಿಂದ ಸೆಪ್ಟೆಂಬರ್ 15ರವರೆಗೆ ವಿಬಿಜಿ ರಾಮ್ ಜಿ ಜಾಬ್‌ಕಾರ್ಡ್ ಮೇಳ ಆಯೋಜಿಸಲಾಗಿದೆ ಎಂದು ತಾಪಂ ಇಒ ಚಂದ್ರಶೇಖರ ಕಂದಕೂರ ಹೇಳಿದರು.
ಜಾಬ್‌ಕಾರ್ಡ್ ಮೇಳದ ಅಂಗವಾಗಿ ರೋಣ ತಾಲೂಕು ಪಂಚಾಯಿತಿಯಲ್ಲಿ ಜಾಬ್‌ಕಾರ್ಡ್ ಮೇಳದ ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಖಾತ್ರಿ ಸೌಲಭ್ಯ ತಲುಪಿಸುವಲ್ಲಿ ಜಾಬ್‌ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಅರ್ಹ ಕುಟುಂಬಗಳು ಯಾವುದೇ ಕಾರಣಕ್ಕೂ ಸೌಲಭ್ಯದಿಂದ ಹೊರಗುಳಿಯದಂತೆ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಸೂಚಿಸಿದರು.
ತಾಲೂಕಿನ 22 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮೇಳವನ್ನು ಪರಿಣಾಮಕಾರಿಯಾಗಿ ನಡೆಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಜಾಬ್‌ಕಾರ್ಡ್ ಹೊಂದಿರದ ಅರ್ಹ ಕುಟುಂಬಗಳನ್ನು ಗುರುತಿಸಿ, ಅಂತಹ ಕುಟುಂಬಗಳಿಗೆ ಯೋಜನೆಯ ಕುರಿತು ಮಾಹಿತಿ ನೀಡಬೇಕು. ಅಗತ್ಯವಿರುವ ಕುಟುಂಬಗಳಿಂದ ಅರ್ಜಿ ಹಾಗೂ ದಾಖಲೆ ಪಡೆದು ಜಾಬ್‌ಕಾರ್ಡ್ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಸೂಚಿಸಿದರು.
ಈಗಾಗಲೇ ಜಾಬ್‌ಕಾರ್ಡ್ ಹೊಂದಿರುವ ಕುಟುಂಬಗಳಿಗೂ ಯೋಜನೆಯಡಿ ಲಭ್ಯವಿರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಬೇಕು. ಗ್ರಾಮಸ್ಥರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ಸಿಬ್ಬಂದಿಯೇ ಗ್ರಾಮಗಳಿಗೆ ತೆರಳಿ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವಂತೆ ಸೂಚನೆ ನೀಡಿದರು.
ಆಗಸ್ಟ್ 15ರಿಂದ ಸೆ. 15ರವರೆಗೆ ನಡೆಯಲಿರುವ ಜಾಬ್‌ಕಾರ್ಡ್ ಮೇಳದ ಯಶಸ್ವಿ ಅನುಷ್ಠಾನಕ್ಕಾಗಿ ಗ್ರಾಪಂ ಮಟ್ಟದಲ್ಲಿ ಸಿಬ್ಬಂದಿಗೆ ಜವಾಬ್ದಾರಿ ನೀಡಲಾಗುತ್ತದೆ. ಮನೆ-ಮನೆಗೆ ಭೇಟಿ, ಅರ್ಹ ಕುಟುಂಬಗಳ ಗುರುತಿಸುವಿಕೆ, ಜಾಬ್‌ಕಾರ್ಡ್ ನೋಂದಣಿಗೆ ಆದ್ಯತೆ ನೀಡಲಾಗುತ್ತದೆ. ಜನರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಲು ಸ್ಥಳೀಯವಾಗಿ ಲಭ್ಯವಿರುವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ತಾಪಂ ಯೋಜನಾಧಿಕಾರಿ ಸಿ.ಎಸ್. ನೀಲಗುಂದ, ವ್ಯವಸ್ಥಾಪಕ ದೇವರಾಜ, ಆರ್.ಎಲ್. ನಾಯ್ಕರ್, ಮಂಜುನಾಥ ಶಿರಸಂಗಿ, ಇತರರು ಇದ್ದರು.