ನರಗುಂದ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ತೇವಾಂಶ ಕೊರತೆಯಿಂದ ಸಂಪೂರ್ಣ ಬಾಡುತ್ತಿವೆ. ಪರಿಣಾಮ ಸಕಾಲದಲ್ಲಿ ಸಮೃದ್ಧ ಮಳೆಗಾಗಿ ಪ್ರಾರ್ಥಿಸುತ್ತಿರುವ ರೈತರು ಸಾಂಪ್ರದಾಯಿಕ ಆಚರನೆಗಳಿಗೆ ಮೊರೆ ಹೋಗಿದ್ದಾರೆ. ತಾಲೂಕಿನ ಭೈರನಹಟ್ಟಿ ಗ್ರಾಮದಲ್ಲಿ ರೈತರು ಜೋಡಿ ಕಪ್ಪೆಗಳಿಗೆ (FROGS) ಮಂಗಳವಾರ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿ ವರುಣನ ಕೃಪೆಗಾಗಿ ಪ್ರಾರ್ಥಿಸಿದರು.
ಗ್ರಾಮದ ಕೆರೆ ದಂಡೆಯಲ್ಲಿರುವ ಮಳೆಯಪ್ಪಜ್ಜನ ಗುಡಿಯಲ್ಲಿ ಕಪ್ಪೆಗಳ ಮದುವೆ ಕಾರ್ಯ ನೆರವೇರಿಸಲಾಯಿತು. ಎರಡು ಜೋಡಿ ಕಪ್ಪೆಗಳನ್ನು ಹಿಡಿದು ಅವುಗಳಿಗೆ ಕೆರೆಯ ನೀರಿನಲ್ಲಿ ಸ್ನಾನ ಮಾಡಿಸಿದ ಬಳಿಕ ಮದುವೆಯ ವಿವಿಧ ಶಾಸ್ತ್ರೋಕ್ತದಂತೆ ವಿಶೇಷ ಪೂಜಾ ವಿಧಾನಗಳ ಮೂಲಕ ಗ್ರಾಮದ ಹಿರೇಮಠದ ವೇ.ಮೂ.ಶಿವಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಮಂತ್ರೋಚ್ಛಾರಗಳನ್ನು ಘೋಷಿಸಿ ಮದುವೆ ಮಾಡಿ ವರುಣನ ಕೃಪೆಗಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಕೆರೆಯ ದಂಡೆಯಲ್ಲಿ ಜೋಳದ ಸಂಗಟಿ ಸಾರು ಪ್ರಸಾದ ನೆರವೇರಿಸಿ ಮಳೆರಾಯನಿಗೆ ನೈವೇದ್ಯ ಮಾಡಿ ಅನ್ನ ಪ್ರಸಾದ ನೆರವೇರಿಸಲಾಯಿತು. ನಾಗಪ್ಪ ಕುರಿ, ರಾಮನಗೌಡ ವೀರನಗೌಡ್ರ, ಗೋಪಾಲ ಬದ್ನೂರ, ಧರ್ಮಣ್ಣ ಬದ್ನೂರ, ಬೂದೇಶ ಐನಾಪೂರ, ನಾಗಪ್ಪ ತೆಗ್ಗಿನಮನಿ, ಶರಣಪ್ಪ ಗದಗಿನ ಇತರರಿದ್ದರು.