ನರಗುಂದ: ರಸ್ತೆ ಮಧ್ಯದ ತೆರೆದ ಚರಂಡಿ (DRAIN)ಯಲ್ಲಿ ಬಿದ್ದು ನರಳಾಡುತ್ತಿದ್ದ ಎರಡು ಗೋವುಗಳನ್ನು ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಗುರುವಾರ ನಡೆದಿದೆ. ದಂಡಾಪುರ ಕುರುಬಗೇರಿ ಓಣಿಯ ಮಂಜು ಸಿದ್ದಪ್ಪ ವಾಘ್ಮೋಡೆ ಅವರು ತಮ್ಮ ಆಕಳನ್ನು ಮಾ. 25ರಂದು ಮೇಯಲು ಹೊರಗೆ ಬಿಟ್ಟಿದ್ದರು. ಈ ವೇಳೆ ರಸ್ತೆ ಪಕ್ಕದ ಚರಂಡಿಯಲ್ಲಿ ಆಯತಪ್ಪಿ ಬಿದ್ದಿತ್ತು. ಮಾ. 26ರಂದು ಪಟ್ಟಣದ ಎನ್‌ಎಚ್‌ಟಿ ಮಿಲ್ ಕ್ವಾಟರ್ಸ್ ಎಸ್‌ವೈಎಸ್ ಕಾಲೇಜ್ ಬಳಿಯ ಚರಂಡಿಯಲ್ಲಿ ಫಕೀರಪ್ಪ ಜಮಾದಾರ ಅವರ ಆಕಳು ಬಿದ್ದು ಅಪಾಯಕ್ಕೆ ಸಿಲುಕಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ ಸ್ಥಳೀಯರ ನೆರವಿದೊಂದಿಗೆ ಎರಡೂ ಗೋವುಗಳನ್ನು ಹಗ್ಗ ಹಾಗೂ ಜೆಸಿಬಿ ಸಹಾಯದಿಂದ ಸುರಕ್ಷಿತವಾಗಿ ಹೊರತೆಗೆದು ಅಪಾಯದಿಂದ ಪಾರು ಮಾಡಿದರು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ ಅಧಿಕಾರಿ ಆರ್.ಎಸ್. ಮೇಟಿ, ಸಿಬ್ಬಂದಿ ಬಿ.ಎಲ್. ಕುಂಚಗನೂರ, ಟಿ.ವೈ. ಕರಾಡೆ, ಜಿ.ಐ .ಕೀಲಬನೂರ, ಎಂ.ಐ. ಮುರನಾಳ, ಎಂ.ವೈ. ಹುನಗುಂಡಿ, ಎಂ.ಬಿ. ಬಾವಾಖಾನವರ, ಇತರರಿದ್ದರು