ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಅಭಿನವ ಶ್ರೀ ಯಚ್ಚರ ಸ್ವಾಮೀಜಿ ವಿವೇಕದ ಬಾಗಿಲು ಪುಸ್ತಕ (books) ಬಿಡುಗಡೆಗೊಳಿಸಿದರು.
ನರಗುಂದ: ಜಗತ್ತಿನಲ್ಲಿ ಪುಸ್ತಕಕ್ಕಿಂತ ಒಳ್ಳೆಯ ಸ್ನೇಹಿತ ಮತ್ತೊಂದಿಲ್ಲ. ಪುಸ್ತಕ books ಓದುವುದರಿಂದ ಮಸ್ತಕ ಶುದ್ಧವಾಗುವುದರ ಜತೆಗೆ ಜ್ಞಾನ ವೃದ್ಧಿಸುತ್ತದೆ ಎಂದು ಶಿರೋಳ ಯಚ್ಚರಸ್ವಾಮಿ ಗವಿಮಠದ ಅಭಿನವ ಶ್ರೀ ಯಚ್ಚರ ಸ್ವಾಮೀಜಿ ಹೇಳಿದರು.
ತಾಲೂಕಿನ ಶಿರೋಳದ ಶ್ರೀ ಯಚ್ಚರಸ್ವಾಮಿ ಗವಿಮಠದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಠದ 28ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿಯೂ ಗ್ರಾಮೀಣ ಭಾಗದ ಯುವ ಸಾಹಿತಿ ಸುನೀಲ ಕಳಸದ ಅವರು, ವಿವೇಕದ ಬಾಗಿಲು ಎಂಬ ಪುಸ್ತಕವನ್ನು ರಚಿಸಿ ಬಿಡುಗಡೆಗೊಳಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಉಪನ್ಯಾಸಕ ವೀರನಗೌಡ ಮರಿಗೌಡ್ರ ಮಾತನಾಡಿ, ವಿವೇಕದ ಬಾಗಿಲು ಓದುಗರ ವಿವೇಕವನ್ನು ಬಡಿದೆಬ್ಬಿಸುತ್ತದೆ. ಈ ಪುಸ್ತಕ ಯುವಕರಿಗೆ ಅತ್ಯುತ್ತಮ ಮಾರ್ಗದರ್ಶಕವಾಗಿದೆ ಎಂದರು.
ಸಾಹಿತಿ ಸುನೀಲ ಕಳಸದ ಸನ್ಮಾನ ಸ್ವೀಕರಿಸಿ ಮಾತನಾಡಿ, ಪುಸ್ತಕ ಬರೆಯಲು ಅನುಭವ ತುಂಬಿದ್ದು ಶಿರೋಳದ ಶ್ರೀ ಯಚ್ಚರಸ್ವಾಮಿ ಗವಿಮಠದ ವೇದಿಕೆ. ಶ್ರೀಮಠದಲ್ಲಿ ನಡೆಯುತ್ತಿದ್ದ ಪುರಾಣ ಪ್ರವಚನ, ಜಾತ್ರಾ ಮಹೋತ್ಸವ ಕಾರ್ಯಕ್ರಮಗಳಿಂದ ಸಾಕಷ್ಟು ವಿಷಯ ಕಲಿತಿದ್ದೇನೆ. ಮಠದ ಆಧ್ಯಾತ್ಮಿಕ ಅನುಭವದಿಂದಲೇ ಪುಸ್ತಕ ಬರೆಯಲು ಸಾಧ್ಯವಾಯಿತು ಎಂದರು.