ಡಿ. 25ರೊಳಗೆ ಅನುಮತಿ ನೀಡದಿದ್ದರೆ ಕೇಸ್ Raita

ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ನರಗುಂದದಲ್ಲಿ ರೈತರಿಂದ ಮಂಗಳವಾರ ಬೃಹತ್ ಪಾದಯಾತ್ರೆ ನಡೆಸಲಾಯಿತು.
ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ನರಗುಂದದಲ್ಲಿ ರೈತರಿಂದ ಮಂಗಳವಾರ ಬೃಹತ್ ಪಾದಯಾತ್ರೆ ನಡೆಸಲಾಯಿತು.
Published on
ನರಗುಂದ: ಮಹದಾಯಿ ಕಳಸಾ-ಬಂಡೂರಿ ಯೋಜನೆಗೆ ಡಿ. 25ರೊಳಗೆ ಅನುಮತಿ ನೀಡದಿದ್ದರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಮೇಲೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲಾಗುವುದು ಎಂದು ರೈತ ಸೇನಾ ಕರ್ನಾಟಕ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು. 
ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ರೈತರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಜಾತಿ ರಾಜಕಾರಣದ ಮನೋಭಾವನೆಗಳಿಂದ ರೈತರು ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ರಾಜಕಾರಣಿಗಳು ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಮತದಾರರು ಜಾಗೃತರಾದಂತೆ ಅವರನ್ನು ಹಣ ಕೊಟ್ಟು ಖರೀದಿಸುವುದರ ಜತೆಗೆ ಅವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಅವೈಜ್ಞಾನಿಕ ಕೃಷಿ ಕಾಯ್ದೆಗಳಿಂದ ದೇಶದ ಆರ್ಥಿಕತೆ ಕುಸಿದು, ನೀರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಮಧ್ಯವರ್ತಿಗಳ ಹಾವಳಿಯಿಂದ ದೇಶದಲ್ಲಿ ಪ್ರತಿವರ್ಷ 3 ಲಕ್ಷ ಹೆಕ್ಟೇರ್ ಕೃಷಿ ಜಮೀನು ಹಾಳಾಗುತ್ತಿದೆ. ರೈತರ ಮಕ್ಕಳಿಗೆ ಕೃಷಿಯ ಸಂಸ್ಕಾರ ಗೊತ್ತಿಲ್ಲದೆ ವಿಮುಖರಾಗುತ್ತಿರುವುದು ಕಳವಳಕಾರಿ ಸಂಗತಿ. ಮಹದಾಯಿ ಹೋರಾಟಕ್ಕೆ ಸಂಬಂಧಿಸಿ ಇದುವರೆಗೆ 43 ವಿವಿಧ ಕೇಸ್‌ಗಳನ್ನು ಅಧಿಕಾರಿ, ಜನಪ್ರತಿನಿಧಿಗಳ ಮೇಲೆ ದಾಖಲಿಸಿದ್ದೇವೆ. 1250 ಕೋಟಿ ರೂ. ವೆಚ್ಚದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳ ನವೀಕರಣ ಕಾಮಗಾರಿಯಿಂದ 2.25 ಲಕ್ಷ ಹೆಕ್ಟೇರ್ ಪ್ರದೇಶದ ರೈತರ ಜಮೀನುಗಳಿಗೆ ನೀರಾವರಿ ಯೋಜನೆ ಸದುಪಯೋಗವಾಗುತ್ತಿತ್ತು. ಧನದಾಹಿ ಅಧಿಕಾರಿ, ರಾಜಕಾರಣಿಗಳಿಂದ ಯೋಜನೆಯ ಮೊತ್ತ 2186.39 ಕೋಟಿ ರೂಪಾಯಿ ವ್ಯಯಿಸಿದರೂ ಕಾಲುಗೆಗಳ ದುರಸ್ತಿಯಾಗದೆ ಯಾರೊಬ್ಬರಿಗೂ ಸರಿಯಾಗಿ ನೀರು ಸಿಗದಂತಾಗಿದೆ ಎಂದರು. 
ರೈತರು ಹಕ್ಕುಗಳಿಗಾಗಿ ಪ್ರಾಣದ ಹಂಗು ತೊರೆದು ಹೋರಾಡುವಂತಾಗಿದೆ. ಹುತಾತ್ಮ ರೈತರ ಸ್ಮಾರಕ ಭವನ ನಿರ್ಮಾಣಕ್ಕಾಗಿ ನೀರಾವರಿ ಇಲಾಖೆಯ 2 ಎಕರೆ ಜಮೀನು ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಮಹತ್ವದ ವಿಚಾರಕ್ಕೆ ಕೆಲ ಅಧಿಕಾರಿಗಳು ವರದಿ ನೀಡಲು ವಿಳಂಬಧೋರಣೆ ಅನುಸರಿಸುತ್ತಿರುವುದರಿಂದ ಅವರ ವಿರುದ್ಧ ಹೈಕೋರ್ಟ್ ಮೊರೆ ಹೋಗುತ್ತೇವೆ. ಕಾಟಾಚಾರಕ್ಕೆ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸುತ್ತಿರುವುದು ಕಾನೂನು ವಿರುದ್ಧ ನಡೆಯಾಗಿದೆ. ಪ್ರಸಕ್ತ ಹಿಂಗಾರು ಹಂಗಾಮಿನ ಕಡಲೆ, ಗೋಧಿ, ಕುಸುಬೆ ಮುಂತಾದ ಬೆಳೆಗಳ ಮಾರಾಟಕ್ಕೆ ತಕ್ಷಣವೇ ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಬೇಕು. ಒಂದು ವಾರದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.  
ರೈತ ದಿನಾಚರಣೆ ಅಂಗವಾಗಿ ಪಟ್ಟಣದ ಪುರಸಭೆ ಆವರಣದಲ್ಲಿರುವ ಬಾಬಾಸಾಹೇಬ ಭಾವೆ ಪುತ್ಥಳಿಗೆ ಮಾಲಾರ್ಪಣೆ ಮಾಡಿ  ಮೆರವಣಿಗೆ ನಡೆಸಲಾಯಿತು. ನೀರಾವರಿ ಇಲಾಖೆಗೆ ಸಂಬಂಧಿಸಿದ 2 ಎಕರೆ ನಿವೇಶನದಲ್ಲಿ ಹುತಾತ್ಮ ರೈತರ ಸ್ಮಾರಕ ಭವನ, ರೈತ ಸಮುದಾಯ ಭವನ ನಿರ್ಮಾಣಕ್ಕೆ ಅಡಿಗಲ್ಲು, ನಾಮಫಲಕ ಅನಾವರಣಗೊಳಿಸಿದರು. ಗುರು ರಾಯನಗೌಡ್ರ, ಮಲ್ಲಣ್ಣ ಅಲೇಕಾರ, ಎಸ್.ಬಿ. ಜೋಗಣ್ಣವರ, ರಾಘವೇಂದ್ರ ಗುಜಮಾಗಡಿ, ಶರಣಗೌಡ ಪಾಟೀಲ, ರಮೇಶ ನಾಯ್ಕರ, ಸೋಮು ಐನಾಪೂರ ಮಾತನಾಡಿದರು. ಸಮಾವೇಶದಲ್ಲಿ ವಿವಿಧ ಗ್ರಾಮಗಳ ನೂರಾರು ರೈತರು ಪಾಲ್ಗೊಂಡಿದ್ದರು.   
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net