ಪ್ರಜಾ ಸೇವೆ ‘ಮಕ್ಕಳ ಕಲಿಕೆಗೆ ಹಿನ್ನಡೆ’

ಶಾಲೆಯಲ್ಲಿ ಪ್ರಜಾಸೇವೆ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಮಕ್ಕಳ ಕಲಿಕೆಗೆ ತೊಂದರೆ
School children heading home, away from the commotion of the 'Prajasewe Andolana' (People's Service Movement) organized in Kaujageri.
ಕೌಜಗೇರಿಯಲ್ಲಿ ಆಯೋಜಿಸಿದ್ದ ಪ್ರಜಾಸೇವೆ ಆಂದೋಲನದ ಗದ್ದಲದಿಂದ ಮನೆಗೆ ಹೊರಟ ಶಾಲಾ ಮಕ್ಕಳು.
Published on: 

ರೋಣ: ತಾಲೂಕಿನ ಕೌಜಗೇರಿ ಗ್ರಾಮ ಪಂಚಾಯಿತಿಯಿಂದ ಶನಿವಾರ ಆಯೋಜಿಸಿದ್ದ ಪ್ರಜಾಸೇವೆ ಆಂದೋಲನ ಜನರಿಗೆ ಅನುಕೂಲ ಒಂದೆಡೆಯಾದರೆ ಮಕ್ಕಳ ಕಲಿಕೆಗೆ ಅಡ್ಡಿಯಾಯಿತು ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂತು.

ಬೆಳಗ್ಗೆ 10.30ರಿಂದ ಆರಂಭವಾಗುವ ಪ್ರಜಾಸೇವೆ ಆಂದೋಲನ ಸಂಜೆಯವರೆಗೂ ಮುಂದುವರಿಯುತ್ತದೆ. ಆದರೆ, ಶಾಲಾ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿರುವುದರಿಂದ ಅಧಿಕಾರಿಗಳ ಭಾಷಣ ಒಂದೆಡೆಯಾದರೆ, ಮತ್ತೊಂದೆಡೆ ತರಗತಿಯಲ್ಲಿ ಶಿಕ್ಷಕರ ಪಾಠ. ಹೀಗಾಗಿ ಮಕ್ಕಳಿಗೆ ಏನು ನಡೆಯುತ್ತಿದೆ ಎಂಬುದೇ ತಿಳಿಯದಂತಾಗಿತ್ತು.

ಪಂಚಾಯಿತಿಗೆ ಅತೀ ಹೆಚ್ಚು ಅರ್ಜಿ: ವಸತಿ ಯೋಜನೆಯಡಿ ನಿವೇಶನ ಹಾಗೂ ಮನೆ ನಿರ್ಮಿಸಿಕೊಡುವಂತೆ ಅತೀ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು. ಅರ್ಜಿ ಸಲ್ಲಿಸಲು ಬಂದವರಿಗೆ ಸರಿಯಾದ ವ್ಯವಸ್ಥೆ ಮಾಡದ್ದರಿಂದ ನೂಕುನುಗ್ಗಲಿನಲ್ಲಿಯೇ ಸಾರ್ವಜನಿಕರು ಅರ್ಜಿ ಸಲ್ಲಿಸಿದರು.

ರೇಷನ್ ಕಾರ್ಡ್ ಕಿರಿಕ್: ಹಣ ಕೊಟ್ಟವರಿಗೆ ಮಾತ್ರ ರೇಷನ್ ಕಾರ್ಡ್ ಕೊಡುತ್ತಾರೆ. ಹಣ ಇಲ್ಲದವರಿಗೆ ರೇಷನ್ ಕಾರ್ಡ್ ಕೊಡಲು ಹಿಂದೇಟು ಹಾಕುತ್ತಾರೆ. ನಮಗೆ ರೇಷನ್ ಕಾರ್ಡ್ ಇಲ್ಲ. ಶೀಘ್ರ ಮಂಜೂರಾತಿ ನೀಡಬೇಕು ಎಂದು ಗ್ರಾಮಸ್ಥರೊಬ್ಬರು ತಹಸೀಲ್ದಾರ್ ಅವರೊಂದಿಗೆ ವಾಗ್ವಾದಕ್ಕಿಳಿದರು. ಅನಾರೋಗ್ಯ ಪೀಡಿತರು ಸರಿಯಾದ ದಾಖಲೆ ನೀಡಿದರೆ ಮಾತ್ರ ಅವರಿಗೆ ರೇಷನ್ ಕಾರ್ಡ್ ನೀಡಲಾಗುತ್ತಿದೆ ಎಂದು ತಹಸೀಲ್ದಾರ್ ಉತ್ತರ ನೀಡಿದರು.

ಶಾಲೆಯಲ್ಲಿ ಪ್ರಜಾ ಸೇವೆ ಆಂದೋಲನ ಹಮ್ಮಿಕೊಳ್ಳಲು ಅನುಮತಿ ಇಲ್ಲ. ನಮ್ಮ ಇಲಾಖೆಯಿಂದ ಅನುಮತಿಯನ್ನೂ ನೀಡಿಲ್ಲ. ಮಕ್ಕಳ ಕಲಿಕೆಗೆ ಅಡ್ಡಿಯಾಗಿರುವುದರಿಂದ ಇನ್ನು ಮುಂದೆ ಯಾವುದೇ ಶಾಲೆಯಲ್ಲಿ ಪ್ರಜಾಸೇವೆ ಆಂದೋಲನ ಹಮ್ಮಿಕೊಳ್ಳದಂತೆ ಸಂಬಂಧಿಸಿದವರಿಗೆ ತಿಳಿಸಲಾಗಿದೆ.

ದಯಾನಂದ ಯಾವಗಲ್ಲ, ಬಿಇಒ

ಗ್ರಾಮದಲ್ಲಿ ಸ್ಥಳಾವಕಾಶದ ಕೊರತೆಯಿಂದ ಶಾಲೆಯಲ್ಲಿ ಪ್ರಜಾಸೇವೆ ಆಂದೋಲನ ಹಮ್ಮಿಕೊಂಡಿದ್ದೇವೆ. ಇದರಿಂದ ಮಕ್ಕಳ ಕಲಿಕೆಗೆ ಅಡ್ಡಿಯಾಗಿದೆ ಎಂಬುದು ತಿಳಿದುಬಂದಿದೆ. ಇನ್ನು ಮುಂದೆ ಶಾಲೆಯಲ್ಲಿ ಆಂದೋಲನ ಆಯೋಜಿಸದಂತೆ ಸೂಚನೆ ನೀಡಿದ್ದೇನೆ.

ಮಂಜುನಾಥ ಅಮಾಶಿ, ಪ್ರಭಾರಿ ತಹಸೀಲ್ದಾರ್