ನರಗುಂದ: ತಾಲೂಕಿನ ರೈತರು ಹಿಂಗಾರು ಹಂಗಾಮಿನಲ್ಲಿ ಬೆಳೆದಿರುವ ವಿವಿಧ ಬೆಳೆಗಳಿಗೆ ಸಮರ್ಪಕ ಕಾಲುವೆ ನೀರು ಹರಿಸುವಂತೆ ಆಗ್ರಹಿಸಿ ಪಟ್ಟಣದ ನೀರಾವರಿ Irrigation ಇಲಾಖೆ ಮುಖ್ಯ ಕಚೇರಿಗೆ ಬೀಗ ಜಡಿದು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸುರಿದ ನಿರಂತರ ಮಳೆಯಿಂದ ತಾಲೂಕಿನ ಬಹುತೇಕ ರೈತರ ಬೆಳೆಗಳು ಸಂಪೂರ್ಣ ಮಣ್ಣು ಪಾಲಾಗಿವೆ. ಆದರೀಗ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಹತ್ತಿ, ಜೋಳ, ಕಡಲೆ, ಗೋವಿನಜೋಳ, ಸೂರ್ಯಕಾಂತಿ ಬೆಳೆಗಳಿಗೆ ಸಮರ್ಪಕ ನೀರೋದಗಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಮಲಪ್ರಭಾ ಬಲದಂಡೆ ಹಾಗೂ ಎಡದಂಡೆ, ಎನ್‌ಬಿಸಿ ಶಾಖಾ ಕಾಲುವೆಗಳ ಮುಖಾಂತರ ರೈತರ ಜಮೀನಿಗೆ ನೀರೋದಗಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಕಾಟಾಚಾರ ಎಂಬಂತೆ ಕೇವಲ 300 ಕ್ಯೂಸೆಕ್ಸ್ ನೀರು ಮಾತ್ರ ಹೊರಹರಿವು ಬಿಟ್ಟಿದ್ದರಿಂದ ಯಾವುದಕ್ಕೂ ಸಾಕಾಗುತ್ತಿಲ್ಲ. ಕಳೆದ 15 ದಿನಗಳ ಹಿಂದೆ ಬಿತ್ತನೆ ಮಾಡಿದ್ದ ಬೆಳೆಗಳಿಗೆ ನೀರಿಲ್ಲದೆ ಮೊಳಕೆಯೊಡೆದು ಕಮರುವ ಹಂತಕ್ಕೆ ತಲುಪಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಚೇರಿಯಲ್ಲಿರದ ಅಧಿಕಾರಿ, ಆಕ್ರೋಶಗೊಂಡ ರೈತರು: ಕಾಲುವೆಗಳಿಗೆ ಸಮರ್ಪಕ ನೀರು ಹರಿಸುವಂತೆ ತಾಲೂಕಿನ ರೈತರು ಪಟ್ಟಣದ ನೀರಾವರಿ ಇಲಾಖೆ ಕಚೇರಿಗೆ ತೆರಳಿದ್ದಾಗ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿರಲಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಕಚೇರಿಗೆ ಬೀಗ ಜಡಿದು ತರಾಟೆಗೆ ತೆಗೆದುಕೊಂಡರು. ಪರಿಣಾಮ ಕಚೇರಿಯ ತಾಂತ್ರಿಕ ವ್ಯವಸ್ಥಾಪಕಿ ಇಂದಿರಾ ಅವಾರಿ ಅವರು ನವಿಲುತೀರ್ಥ ಜಲಾಶಯದ ಮಲಪ್ರಭಾ ನೀರು ನಿರ್ವಹಣಾ ಕೇಂದ್ರದ ಅಧಿಕಾರಿ ಎಫ್.ಎಂ. ಜವಳಿ ಜತೆಗೆ ಮಾತನಾಡಿದರು. ನರಗುಂದ ಬ್ಲಾಕ್ (ಎನ್‌ಬಿಸಿ) ಕಾಲುವೆಗೆ ನ.14 ರಿಂದ 700 ಕ್ಯೂಸೆಕ್ಸ್, ಎಂಆರ್‌ಬಿಸಿ ಕಾಲುವೆಗೆ 400 ಕ್ಯೂಸೆಕ್ಸ್ ಹೆಚ್ಚುವರಿ ನೀರು ಬೆಳಗ್ಗೆಯಿಂದ ಹರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇದಕ್ಕೆ ರೈತರು ಪ್ರತಿರೋಧ ವ್ಯಕ್ತಪಡಿಸಿ ನೀವು 700 ಕ್ಯೂಸೆಕ್ಸ್ ನೀರು ಎನ್‌ಬಿಸಿ ಕಾಲುವೆ ಬಿಟ್ಟಿರುವುದಕ್ಕೆ ಏನು ಗ್ಯಾರಂಟಿ. ಈ ಕಾಲುವೆ ಮುಖ್ಯ ಗೇಟ್‌ಗೆ ನಾವೇ ಹೋಗಿ ಪರಿಶೀಲಿಸುತ್ತೇವೆ ಎಂದುರೈತರು ಹಠ ಹಿಡಿದರು. ನೀರಾವರಿ ಇಲಾಖೆ ಜೀಪ್‌ನಲ್ಲಿ ರೈತ ಮುಖಂಡರನ್ನು ಕಾಲುವೆ ಮುಖ್ಯ ಗೇಟ್ ಬಳಿಗೆ ಕರೆದೊಯ್ದಿದ್ದರಿಂದ ಸಮಸ್ಯೆ ಬಗೆಹರಿಯಿತು.
ಅಧಿಕಾರಿಗಳ ವರ್ಗಾವಣೆ ಮಾಡಿ: ನರಗುಂದ ತಾಲೂಕಿನ ಬಹುತೇಕ ಕಾಲುವೆಗಳು ದುರಸ್ತಿಯಲ್ಲಿವೆ. ಈ ಕುರಿತು ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಕಾಲುವೆಗಳ ದುರಸ್ತಿಪಡಿಸುವುದರ ಬದಲು ಹಿಂಗಾರು ಹಂಗಾಮಿಗಾಗಿ ಕೇವಲ 300 ಕ್ಯೂಸೆಕ್ಸ್ ನೀರು ಹರಿಬಿಟ್ಟಿದ್ದಾರೆ. ಹೆಚ್ಚುವರಿ ನೀರು ಹರಿಸಲು ನಿರ್ಲಕ್ಷ್ಯ ಮಾಡುತ್ತಿರುವ ಅಧಿಕಾರಿಗಳನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.