ಶಿರಹಟ್ಟಿ: ತಾಲೂಕಿನ ದೇವಿಹಾಳ ಗ್ರಾಮದಲ್ಲಿ ನಡೆದ ಪೊಲೀಸ್ ದೌರ್ಜನ್ಯದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಾಸಕ ಡಾ. ಚಂದ್ರು ಲಮಾಣಿ ಅವರು ಸ್ಥಳೀಯ ಪೊಲೀಸ್ ಠಾಣೆಯ ಎದುರು ಮಂಗಳವಾರ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ.
ಗ್ರಾಮದಲ್ಲಿ ಇಸ್ಪೀಟ್ ಆಡುತ್ತಿದ್ದ ಮೂವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲದೆ ಮೂವರನ್ನೂ ಅರೆಬೆತ್ತಲೆಗೊಳಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ. ಮೂವರ ಪೈಕಿ ಸೋಮಣ್ಣ ಲಮಾಣಿ ಎಂಬುವವರ ಖಾಸಗಿ ಅಂಗಾಂಗ ಗಾಯಗೊಳಿಸಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.
ಸೋಮಣ್ಣ ಲಮಾಣಿ ಕುಟುಂಬಸ್ಥರು ಮತ್ತು ಸಮಾಜದ ಮುಖಂಡರು ಶಿರಹಟ್ಟಿ ಠಾಣೆಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ದೌರ್ಜನ್ಯ ಎಸಗಿದ ಸಿಪಿಐ ಮತ್ತು ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳದೆ ಇರುವುದರಿಂದ ಅಹೋರಾತ್ರಿ ಧರಣಿ ಕುಳಿತುಕೊಂಡಿದ್ದೇನೆ ಎಂದರು.
ಉನ್ನತ ಅಧಿಕಾರಿಗಳು ಸೂಕ್ತ ಉತ್ತರ ನೀಡುವವರೆಗೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವವರೆಗೂ ಪೊಲೀಸ್ ಠಾಣೆಯಿಂದ ಕದಲುವುದಿಲ್ಲ ಎಂದು ಶಾಸಕರು ಎಚ್ಚರಿಸಿದರು.