PROTEST ಭಾರಿ ವಾಹನ ಸಂಚಾರ ನಿರ್ಬಂಧಿಸಿ ಪ್ರತಿಭಟನೆ

PROTEST
PROTEST
Published on
ಲಕ್ಷ್ಮೇಶ್ವರ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ)ಯಡಿ ನಿರ್ಮಿಸಿರುವ ಗೊಜನೂರ- ಗುಂಜಳ ರಸ್ತೆಯು ಪವನ ವಿದ್ಯುತ್ ಕಂಪನಿಯ ಭಾರಿ ವಾಹನಗಳ ಸಂಚಾರದಿಂದ ಸಂಪೂರ್ಣವಾಗಿ ಹಾಳಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ರೈತರು ಗುರುವಾರ ಭಾರಿ ವಾಹನದ ಸಂಚಾರ ತಡೆದು ಪ್ರತಿಭಟನೆ (PROTEST) ನಡೆಸಿದರು.
2020ರಲ್ಲಿ ಶಾಸಕರಾಗಿದ್ದ ರಾಮಣ್ಣ ಲಮಾಣಿ ಅವರ ಆಸಕ್ತಿಯಿಂದ 5.6 ಕಿ.ಮೀ. ಉದ್ದದ ರಸ್ತೆ ನಿರ್ಮಾಣಗೊಂಡಿದೆ. ಗೊಜನೂರ, ಮಾಡಳ್ಳಿ, ಯತ್ನಳ್ಳಿ ಹಾಗೂ ಗುಂಜಳ ಭಾಗದ ನೂರಾರು ಹೆಕ್ಟೇರ್ ಕೃಷಿಭೂಮಿಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಕಳೆದ 6 ತಿಂಗಳಿಂದ 60 ರಿಂದ 70 ಟನ್ ತೂಕದ ಸಾಮಗ್ರಿ ಸಾಗಿಸುವ ಭಾರಿ ವಾಹನಗಳ ಸಂಚಾರದಿಂದ ರಸ್ತೆ ಮತ್ತು ಮಾರ್ಗದ ಸೇತುವೆಗಳು ಹಾಳಾಗುತ್ತಿವೆ. ಪವನ ವಿದ್ಯುತ್ ಯೋಜನೆ ಕಾಮಗಾರಿಗಾಗಿ ವಾಹನಗಳು ಅನುಮತಿ ಇಲ್ಲದೆ ರಸ್ತೆ ಬಳಸುತ್ತಿವೆ. ಈ ಬಗ್ಗೆ ಕಂಪನಿಯವರಿಗೆ ಹಲವು ಬಾರಿ ಮನವಿ ಮಾಡಿದರೂ ಕ್ಯಾರೇ ಎನ್ನುತ್ತಿಲ್ಲ. ರಾತ್ರೋರಾತ್ರಿ ಕಂಪನಿಯ ಗ್ರಿಡ್‌ಗೆ ಸಾಮಗ್ರಿ ಸಾಗಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಬೆಳಗ್ಗಿನಿಂದಲೇ ವಾಹನಗಳನ್ನು ತಡೆದ ರೈತರು, ಇನ್ನುಂದೆ ಭಾರಿ ವಾಹನಗಳಿಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಧನಂಜಯ ಎಂ. ರೈತರ ಅಹವಾಲು ಆಲಿಸಿ, ಕಂಪನಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಸ್ತೆ ಬಳಕೆಗೆ ಅನುಮತಿ ಪಡೆದಿರುವ ಬಗ್ಗೆ ಪ್ರಶ್ನಿಸಿದ ಅವರು, ಸಂಪರ್ಕ ರಸ್ತೆಗೆ ಹಾನಿಯಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಕಂಪನಿಯ ಹಿರಿಯ ಅಧಿಕಾರಿಗಳು ಸೋಮವಾರ ಗ್ರಾಮಸ್ಥರೊಂದಿಗೆ ಸಭೆ ನಡೆಸಲಿದ್ದು, ಅಲ್ಲಿಯವರೆಗೆ ಭಾರಿ ವಾಹನಗಳನ್ನು ತರುವುದಿಲ್ಲ ಎಂದು ಕಂಪನಿ ಅಧಿಕಾರಿಗಳು ಭರವಸೆ ನೀಡಿದರು. ಆದರೆ ತಡೆಹಿಡಿದ ವಾಹನವನ್ನು ಸೋಮವಾರದವರೆಗೆ ಬಿಡುವುದಿಲ್ಲ ಎಂದು ರೈತರು ಸ್ಪಷ್ಟ್ಟಪಡಿಸಿದರು.
ಹಾನಿಗೊಳಗಾದ ರಸ್ತೆ ಹಾಗೂ ಸೇತುವೆಗಳನ್ನು ಕಂಪನಿಯ ವೆಚ್ಚದಲ್ಲೇ ದುರಸ್ತಿಪಡಿಸಬೇಕು ಮತ್ತು ಭಾರಿ ವಾಹನಗಳ ಸಂಚಾರಕ್ಕೆ ಶಾಶ್ವತ ನಿಯಂತ್ರಣ ವಿಧಿಸಬೇಕು ಎಂದು ರೈತರು ಒತ್ತಾಯಿಸಿದರು. ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮಾಸಿ, ಕಂದಾಯ ಅಧಿಕಾರಿ ಎಂ.ಎ. ನದಾಫ್, ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು. ರೈತ ಮುಖಂಡರಾದ ಶಿವರಾಜಗೌಡ ಪಾಟೀಲ, ಮಹಾಂತಗೌಡ ಪಾಟೀಲ, ಸಿದ್ದಲಿಂಗೇಶ ಸೊರಟೂರ, ಆರ್.ಡಿ. ಪ್ರಭಯ್ಯನಮಠ, ಹೇಮಣ್ಣ ಕರೆಣ್ಣವರ, ಪ್ರವೀಣ ಮಾಡಳ್ಳಿ, ಚಂದ್ರಗೌಡ ದೊಡ್ಡಗೌಡ್ರ, ಚನ್ನವೀರಯ್ಯ್ರ ಹಿರೇಮಠ, ಮಾಂತೇಶ ಸೊರಟೂರ, ಫಕೀರೇಶ ಕಲ್ಲೂರ, ಹನುಮಂತಪ್ಪ ಯಳವತ್ತಿ, ಬಸಪ್ಪ ಕಪ್ಪತ್ತನವರ, ಚನ್ನಪ್ಪ ಷಣ್ಮುಕಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net