Sanctuary ಕಪ್ಪತಗುಡ್ಡ ಅರಣ್ಯದಲ್ಲಿ ಆದೀತೆ ಜಿಂಕೆ ವನ, ನವಿಲು ಧಾಮ

Sanctuary ನವಿಲುಧಾಮ, ಜಿಂಕೆ ವನ
Sanctuary ನವಿಲುಧಾಮ, ಜಿಂಕೆ ವನ
Published on

ಪ್ರಮುಖ ಮುಖ್ಯಾಂಶಗಳು

  • 243 ಬಗೆಯ ಪಕ್ಷಿಗಳ ಆವಾಸಸ್ಥಾನ ಕಪೋತಗಿರಿ
  • ವನ್ಯಜೀವಿ ರಕ್ಷಣೆಗೆ ಬರುವುದೇ ಬಲ
  • ಅರಣ್ಯ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವ
  • ಪ್ರಾಣಿಪ್ರಿಯರ ಬಹುದಿನಗಳ ಬೇಡಿಕೆಗೆ ಸ್ಪಂದನೆ
ಮುಂಡರಗಿ:
ಉತ್ತರ ಕರ್ನಾಟಕ ಸಹ್ಯಾದ್ರಿ ಎಂದೇ ಕರೆಸಿಕೊಳ್ಳುವ ಕಪ್ಪತಗುಡ್ಡ ಪ್ರಕೃತಿ ಸೌಂದರ್ಯ ಸ್ಥಳವಾಗಿದೆ. ಸುಂದರ ಪರ್ವತಗಳ ಸಾಲುಗಳು ಪರಿಸರ ಪ್ರಿಯರನ್ನು ಕೈಬೀಸಿ ಕರೆಯುತ್ತದೆ. ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಪ್ರಾಣಿ, ಪಕ್ಷಿಗಳ ನಲಿದಾಟದ ದೃಶ್ಯ ಕಣ್ತುಂಬಿಕೊಳ್ಳುವುದೆ ಸ್ವರ್ಗ. ಸಂರಕ್ಷಿತ ಮತ್ತು ವನ್ಯಜೀವಿಧಾಮವಾಗಿರುವ ಕಪ್ಪತಗುಡ್ಡ ಅರಣ್ಯ ಪ್ರದೇಶದ ಸುತ್ತಲಿನ ಪ್ರದೇಶದಲ್ಲಿ ಅಪಾರ ಸಂಖ್ಯೆಯಲ್ಲಿ ಜಿಂಕೆ, ಕೃಷ್ಣಮೃಗಗಳು, ನವಿಲುಗಳು ಕಾಣಸಿಗುತ್ತವೆ. ಅವುಗಳ ಓಡಾಟ, ನಲಿದಾಟ ಮನಸಿಗೆ ಮುದ ನೀಡುತ್ತವೆ.
ಜಿಂಕೆ, ಕೃಷ್ಣ ಮೃಗಗಳು ಕಪ್ಪತಗುಡ್ಡ ಸುತ್ತಲಿರುವ ರೈತರ ಜಮೀನಿಗೆ ತೆರಳಿ ಬೆಳೆಹಾನಿ ಮಾಡುತ್ತವೆ. ರೈತರು ಕಿರಿಕಿರಿ ಅನುಭವಿಸುವಂತಾಗಿದೆ. ಜಿಂಕೆ ಹಾಗೂ ಕೃಷ್ಣಮೃಗ ವನ ನಿರ್ಮಿಸಿದರೆ ಒಂದೆಡೆ ಪ್ರವಾಸಿ ತಾಣವಾಗುವುದರ ಜತೆಗೆ ಈ ಭಾಗದ ರೈತರಿಗೂ ಸಹಕಾರಿವಾಗುತ್ತದೆ. ಮತ್ತೊಂದೆಡೆ ಪ್ರಾಣಿ ಪ್ರಿಯರು ಜಿಂಕೆ, ಕೃಷ್ಣ ಮೃಗ ವನಕ್ಕೆ ತೆರಳಿ ಒಂದೇ ಕಡೆ ಅವುಗಳನ್ನು ವೀಕ್ಷಿಸಬಹುದು. ಇದರೊಟ್ಟಿಗೆ ಸಾವಿರಾರು ಸಂಖ್ಯೆಯಲ್ಲಿ ನವಿಲುಗಳಿವೆ. ಜಿಂಕೆ, ಕೃಷ್ಣ ಮೃಗಗಳ ವನದ ಜತೆಗೆ ನವಿಲುಧಾಮವನ್ನು ಮಾಡಿದರೆ ಪ್ರವಾಸಿ ಪ್ರಿಯರು, ಪಕ್ಷಿಪ್ರಿಯರ ಸಂಖ್ಯೆ ಹೆಚ್ಚಳವಾಗಲಿದೆ. ಇದರಿಂದ ಇಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಾಯವಾಗುತ್ತದೆ.

ಕಪ್ಪತಗುಡ್ಡದ ಪರಿಸರವೇ ಪ್ರಶಸ್ತ

33 ಸಾವಿರ ಹೆಕ್ಟೇರ್ ಪ್ರದೇಶ ವಿಸ್ತಾರದ ಕಪ್ಪತಗುಡ್ಡವು ಗದಗ ತಾಲೂಕಿನ ಬಿಂಕದಕಟ್ಟಿಯಿಂದ ಮುಂಡರಗಿ ತಾಲೂಕಿನ ಶಿಂಗಟಾಲೂರವರೆಗೂ ಹಬ್ಬಿದೆ. ಕರಿಲೆಕ್ಕಿ, ಅಶ್ವಗಂಧ, ಚದುರಂಗ, ಅಮೃತಬಳ್ಳಿ, ಸೇರಿದಂತೆ 300ಕ್ಕೂ ಹೆಚ್ಚು ಆಯುರ್ವೇದ ಸಸ್ಯಗಳು ಇಲ್ಲಿ ಸಿಗುತ್ತವೆ. ಕಡಕೋಳ ಮತ್ತು ಗಾಳಿಗುಂಡಿ ಎರಡೂ ಕಡೆಗಳಲ್ಲಿ ಟ್ರೆಕ್ಕಿಂಗ್ ವ್ಯವಸ್ಥೆ, ವೀವ್ ಪಾಯಿಂಟ್, ಸಫಾರಿ, ಇನ್ನಿತರ ಆಕರ್ಷಕ ಕೆಲಸಗಳನ್ನು ಮಾಡಲಾಗಿದೆ. ಜಿಂಕೆ, ನವಿಲುಗಳ ಸಂರಕ್ಷಣೆ ಹಾಗೂ ಪ್ರವಾಸೋದ್ಯಮ ದೃಷ್ಟಿಯಿಂದ ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಜಿಂಕೆ ವನ ನಿರ್ಮಿಸಬೇಕು ಎನ್ನುವುದು ಪರಿಸರ ಪ್ರಿಯರ ಒತ್ತಾಯ.
"

ಜಿಂಕೆ ವನ ಮಾಡುವುದಕ್ಕೆ ನಂದಿವೇರಿ ಮಠದ ಭಾಗದಲ್ಲಿ ಒಂದು ಸಾವಿರ ಎಕರೆ ಗುರುತಿಸಲಾಗಿದೆ. ಅಲ್ಲಿ ಜಿಂಕೆಗಳನ್ನು ತಂದು ಬಿಡಲಾಗುವುದು. ಈ ಬಗ್ಗೆ ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಫಾರಿ ಜೀಪ್ ಮೂಲಕ ತೆರಳಿ ಜಿಂಕೆಗಳ ವೀಕ್ಷಣೆ ಮಾಡಬಹುದು. ಕಪ್ಪತಗುಡ್ಡ ಭಾಗದಲ್ಲಿ 243 ಬಗೆಯ ಪಕ್ಷಿಗಳಿವೆ. ನವಿಲುಧಾಮ ಮಾಡಲು ಸಹ ಪ್ರಸ್ತಾವ ಸಲ್ಲಿಸಲಾಗುವುದು.-ಮಂಜುನಾಥ -ಮೇಗಲಮನಿ, ಆರ್‌ಎಫ್‌ಒ ಮುಂಡರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net