PANCHAMI: ಬಾಂಧವ್ಯ ಗಟ್ಟಿಗೊಳಿಸುವ ಹಬ್ಬ ಪಂಚಮಿ

ನರೇಗಲ್ಲ ಸಮೀಪದ ಜಕ್ಕಲಿ  ಮೆಣಸಗಿಯವರ ಓಣಿಯಲ್ಲಿ ಶನಿವಾರ ರೊಟ್ಟಿ ಪಂಚಮಿ ನಿಮಿತ್ತ ಮಹಿಳೆಯರು ಬುತ್ತಿ ವಿನಿಮಯ ಮಾಡಿಕೊಂಡರು. ಕೀರ್ತಿ ಮೆಣಸಗಿ, ವೈಷ್ಣವಿ ಹೂಗಾರ, ಲಕ್ಷ್ಮೀ ಮಡಿವಾಳರ, ಸಿದ್ದಲಿಂಗವ್ವ ಅಂಗಡಿ ಇದ್ದರು.
ನರೇಗಲ್ಲ ಸಮೀಪದ ಜಕ್ಕಲಿ ಮೆಣಸಗಿಯವರ ಓಣಿಯಲ್ಲಿ ಶನಿವಾರ ರೊಟ್ಟಿ ಪಂಚಮಿ ನಿಮಿತ್ತ ಮಹಿಳೆಯರು ಬುತ್ತಿ ವಿನಿಮಯ ಮಾಡಿಕೊಂಡರು. ಕೀರ್ತಿ ಮೆಣಸಗಿ, ವೈಷ್ಣವಿ ಹೂಗಾರ, ಲಕ್ಷ್ಮೀ ಮಡಿವಾಳರ, ಸಿದ್ದಲಿಂಗವ್ವ ಅಂಗಡಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳೆಯರಿಂದ ರೊಟ್ಟಿ ವಿನಿಮಯ
  • ಗ್ರಾಮೀಣ ಭಾಗದಲ್ಲಿ ಸಂಭ್ರಮ
  • ಗ್ರಾಮೀಣ ಭಾಗದ ವಿಶೇಷ ಸಂಪ್ರದಾಯ
ನರೇಗಲ್ಲ: ಮಹಿಳೆಯರ ಅಚ್ಚುಮೆಚ್ಚಿನ ಹಬ್ಬವಾಗಿರುವ ರೊಟ್ಟಿ ಪಂಚಮಿ, (PANCHAMI) ಆಧುನಿಕ ಕಾಲದಲ್ಲಿಯೂ ತನ್ನದೇ ಆದ ಸೊಗಡನ್ನು ಉಳಿಸಿಕೊಂಡಿದೆ. ಹಬ್ಬದ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮ ಮನೆಗಳಲ್ಲಿ ಸಿದ್ಧಪಡಿಸಿದ ರೊಟ್ಟಿ, ಚಪಾತಿ ಹಾಗೂ ವಿವಿಧ ಬಗೆಯ ಪಲ್ಯಗಳನ್ನು ನೆರೆಹೊರೆಯವರು, ಬಂಧು-ಬಳಗದ ಮನೆಗಳಿಗೆ ಕೊಂಡೊಯ್ದು ಪರಸ್ಪರ ಹಂಚಿಕೊಂಡರು.
ಸಮೀಪದ ಜಕ್ಕಲಿ ಗ್ರಾಮದಲ್ಲಿಯೂ ಮಹಿಳೆಯರು ಹಾಗೂ ಮಕ್ಕಳು ಹೊಸ ಉಡುಪುಗಳನ್ನು ಧರಿಸಿ ರೊಟ್ಟಿ ಹಂಚುವ ಸಂಭ್ರಮದಲ್ಲಿ ಪಾಲ್ಗೊಂಡರು.
ಒಂದು ವಾರದಿಂದಲೇ ಮಹಿಳೆಯರು ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದರು. ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಎಳ್ಳು ರೊಟ್ಟಿ, ಗುರೆಳ್ಳು ಚಟ್ನಿ, ಚಪಾತಿ, ಉಂಡಿ ಸೇರಿದಂತೆ ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಲಾಗಿತ್ತು. ಇದರೊಂದಿಗೆ ಹೆಸರುಕಾಳು ಪಲ್ಯ, ಮಡಿಕೆಕಾಳು ಪಲ್ಯ, ಬದನೆಕಾಯಿ ಪಲ್ಯ, ಹಿಟ್ಟಿನ ಪಲ್ಯ, ಮೆಂತೆಪಲ್ಯ, ಮೂಲಂಗಿ ಸೊಪ್ಪು, ಹಕ್ಕರಕಿ, ಸೌತೆಕಾಯಿ, ಗಜ್ಜರಿ ಸೇರಿದಂತೆ ವಿವಿಧ ತರಕಾರಿ ಹಾಗೂ ಸೊಪ್ಪಿನ ಖಾದ್ಯಗಳನ್ನು ಸಿದ್ಧಪಡಿಸಿ ಮನೆಯ ದೇವರಿಗೆ ನೈವೇದ್ಯ ಅರ್ಪಿಸಲಾಯಿತು.
ರೊಟ್ಟಿ ಪಂಚಮಿ ಎಂದರೆ ಕೇವಲ ರೊಟ್ಟಿ ಹಂಚುವ ಹಬ್ಬವಲ್ಲ. ರೊಟ್ಟಿಯೊಂದಿಗೆ ವಿವಿಧ ಬಗೆಯ ಪಲ್ಯ, ಚಪಾತಿ, ಉಂಡಿ ಹಾಗೂ ಮನೆಯಲ್ಲಿಯೇ ತಯಾರಿಸಿದ ಖಾದ್ಯಗಳನ್ನು ತಟ್ಟೆಯಲ್ಲಿ ಬಡಿಸಿ ನೆರೆಹೊರೆಯವರ ಮನೆಗೆ ಕೊಂಡೊಯ್ದು ಹಂಚುವುದು ಈ ಹಬ್ಬದ ವಿಶೇಷತೆ. ಆಕಡೆಯಿಂದಲೂ ಅವರು ತಮ್ಮ ಮನೆಯಲ್ಲಿ ಸಿದ್ಧಪಡಿಸಿದ ಅಡುಗೆಯನ್ನು ಪ್ರೀತಿಯಿಂದ ನೀಡಿ ಆತ್ಮೀಯತೆ ಮೆರೆದರು.
ಪಂಚಮಿ ಹಬ್ಬದಲ್ಲಿ ವಿಶೇಷವಾಗಿ ಮದುವೆಯಾಗಿ ತವರು ಮನೆಗೆ ಬಂದ ಹೆಣ್ಣುಮಕ್ಕಳು ಬಂಧು-ಬಳಗದವರೊಂದಿಗೆ ಸೇರಿ ಹಬ್ಬ ಆಚರಿಸುವುದು ಗ್ರಾಮೀಣ ಭಾಗದ ವಿಶೇಷ ಸಂಪ್ರದಾಯವಾಗಿದೆ. ತವರು ಮನೆಯ ಅಂಗಳದಲ್ಲಿ ಸಹೋದರಿಯರು, ಅತ್ತೆ-ಸೊಸೆಯರು ಹಾಗೂ ಬಂಧುಗಳು ಸೇರಿ ಅಡುಗೆ ತಯಾರಿಸಿ, ಪರಸ್ಪರ ರೊಟ್ಟಿ ಹಂಚಿಕೊಂಡು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದರು.
ಇಂದಿನ ದಿನಗಳಲ್ಲಿ ಮೊಬೈಲ್ ಫೋನ್, ಸಾಮಾಜಿಕ ಜಾಲತಾಣ ಹಾಗೂ ಆಧುನಿಕ ಜೀವನದ ಒತ್ತಡದಿಂದಾಗಿ ನೆರೆಹೊರೆಯವರೊಂದಿಗೆ ನೇರವಾಗಿ ಬೆರೆಯುವ ಸಂದರ್ಭಗಳು ಕಡಿಮೆಯಾಗುತ್ತಿವೆ. ಆದರೆ ರೊಟ್ಟಿ ಪಂಚಮಿಯಂತಹ ಆಚರಣೆಗಳು ಜನರನ್ನು ಮನೆಗಳಿಂದ ಹೊರಗೆ ಕರೆತಂದು ಪರಸ್ಪರ ಭೇಟಿಯಾಗುವಂತೆ ಮಾಡುತ್ತಿವೆ. ಒಂದು ತಟ್ಟೆ ರೊಟ್ಟಿ ನೆಪದಲ್ಲಿ ಹಲವು ಮನೆಗಳ ಬಾಗಿಲು ತಟ್ಟುವ ಮೂಲಕ ಹಳೆಯ ಪರಿಚಯಗಳು ಮತ್ತಷ್ಟು ಗಟ್ಟಿಯಾಗುತ್ತಿವೆ.

ನಮ್ಮ ನಾಡಿನ ಸಂಸ್ಕೃತಿ, ಆಹಾರ ಪದ್ಧತಿ ಹಾಗೂ ಗ್ರಾಮೀಣ ಬದುಕಿನ ಸೊಗಡನ್ನು ಹೊಸ ತಲೆಮಾರಿಗೆ ಪರಿಚಯಿಸುವ ಸೇತುವೆಯಾಗಿ ಇಂತಹ ಹಬ್ಬಗಳು ಕಾರ್ಯನಿರ್ವಹಿಸುತ್ತಿವೆ. ಅಜ್ಜ-ಅಜ್ಜಿಯರು, ತಾಯಿ-ತಂದೆಯರು ಆಚರಿಸಿಕೊಂಡು ಬಂದ ಸಂಪ್ರದಾಯವನ್ನು ಮಕ್ಕಳು ಕಣ್ಣಾರೆ ನೋಡಿ, ಅದರ ಮಹತ್ವವನ್ನು ಅರಿತುಕೊಳ್ಳುವ ಅವಕಾಶವೂ ಇದರಿಂದ ದೊರೆಯುತ್ತದೆ.

— ಕೀರ್ತಿ ಮೆಣಸಗಿ ಜಕ್ಕಲಿ ಗ್ರಾಮದ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net