ಲಕ್ಷ್ಮೇಶ್ವರ: ಕಳೆದ 15 ದಿನಗಳಿಂದ ಮೆಕ್ಕೆಜೋಳದ maize ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟ ಮತ್ತು ಅನೇಕ ಸಂಘಟನೆಗಳು ಶನಿವಾರ ಗೋವಿನಜೋಳದ ತೆನೆಗಳನ್ನು ರಸ್ತೆಗೆ ಚೆಲ್ಲಿ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸಮಗ್ರ ರೈತ ಸಂಘಟನೆಗಳ ಒಕ್ಕೂಟ ಮಂಜುನಾಥ ಮಾಗಡಿ ಮಾತನಾಡಿ, ರೈತರ ಸಹನೆ ಮಿತಿ ಮೀರುತ್ತಿದೆ. ಇನ್ನೆರಡು ದಿನಗಳಲ್ಲಿ ಖರೀದಿ ಕೇಂದ್ರ ಆರಂಭವಾಗದಿದ್ದರೆ, ಎತ್ತು ಚಕ್ಕಡಿಯೊಂದಿಗೆ ರಾಜ್ಯ ಹೆದ್ದಾರಿ ಬಂದ್ ಮಾಡಿ ದೊಡ್ಡ ಮಟ್ಟದ ಹೋರಾಟಕ್ಕಿಳಿಯುತ್ತೇವೆ.
ನ. 21ರಂದು ಸರ್ಕಾರ ಗೋವಿನಜೋಳ ಖರೀದಿ ಕೇಂದ್ರ ಪ್ರಾರಂಭಿಸುವ ಭರವಸೆ ನೀಡಿತ್ತು. ಎಂಟು ದಿನ ಕಳೆದರೂ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ. ರೈತರ ಸಹನೆಯ ಕಟ್ಟೆಯೊಡೆಯುವ ಮೊದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.
ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ದುರ್ಗೇಶ ರುದ್ರಾಕ್ಷಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ತಹಸೀಲ್ದಾರ್ ಧನಂಜಯ ಎಂ. ಅವರು ಫೆಡರೇಶನ್ ಮೂಲಕ ಖರೀದಿ ಕೇಂದ್ರ ಪ್ರಾರಂಭಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಅದಕ್ಕಾಗಿ ಜಿಲ್ಲಾಧಿಕಾರಿ ಬೆಂಗಳೂರಿಗೆ ಹೋಗಿದ್ದಾರೆ. ಅವರ ನಿರ್ದೇಶನದಂತೆ ಬುಧವಾರದೊಳಗೆ ಲಕ್ಷ್ಮೇಶ್ವರದಲ್ಲಿ ಕೇಂದ್ರ ಪ್ರಾರಂಭಿಸಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪವಾಸ ನಿರತ ಆದ್ರಳ್ಳಿ ಶ್ರೀಗಳು, ಸರ್ಕಾರ ಈಗಾಗಲೇ ರೈತ ಹೋರಾಟಗಾರರ ನಂಬಿಕೆ-ವಿಶ್ವಾಸ ಕಳೆದುಕೊಂಡಿದೆ. ಸೋಮವಾರದಿಂದ ಹೋರಾಟದ ಸ್ವರೂಪ ತೀವ್ರಗೊಳಿಸುತ್ತೇವೆ ಎಂದರು.
ಕಿಸಾನ್ ಜಾಗೃತಿ ವಿಕಾಸ ಸಂಘದ ಜಿಲ್ಲಾಧ್ಯಕ್ಷ ನಿಂಗಪ್ಪ ಭಂಡಾರಿ, ಮುಂಡರಗಿ ಘಟಕದ ವಿಶ್ವನಾಥ ತಾಮ್ರಗುಂಡಿ, ಪೂರ್ಣಾಜಿ ಖರಾಟೆ, ಜ್ಞಾನೋಬಾ ಬೋಮಲೆ, ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಸೋಮಣ್ಣ ಡಾಣಗಲ್, ಈರಣ್ಣ ಗಟ್ಟಿ, ಮಲ್ಲಯ್ಯ ಗೊಂಡಬಾಳಮಠ, ಜಗದೀಶಗೌಡ ಪಾಟೀಲ, ಪಾಲ್ಗೊಂಡಿದ್ದರು.
ರಾಮಗಿರಿ ರೈತರು ಹೋರಾಟಗಾರರಿಗೆ ಬುತ್ತಿ ಕಟ್ಟಿಕೊಂಡು ಎತ್ತು ಚಕ್ಕಡಿಯೊಂದಿಗೆ ಆಗಮಿಸಿದ್ದರು.